ಸಾಂದರ್ಭಿಕ ಚಿತ್ರ | Photo Credit : PTI

ಹೊಸದಿಲ್ಲಿ: ಅಗಾಧ ಪ್ರಮಾಣದಲ್ಲಿ ಅಂತರ್ಜಲವನ್ನು ಹೊರದೆಗೆಯುವ ಉದ್ಯಮಗಳಿಗೆ ವಿಧಿಸಲಾಗುವ ‘ಪರಿಸರ ಪರಿಹಾರ’ ದಂಡದಲ್ಲಿ 75 ಶೇಕಡವರೆಗೆ ವಿನಾಯಿತಿ ನೀಡುವ ಯೋಜನೆಯೊಂದನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.

ಈ ಯೋಜನೆಯು, ಕಡ್ಡಾಯ ಅನುಮತಿ ಪಡೆಯದೆ ಅಂತರ್ಜಲ ಹೊರತೆಗೆಯುವುದು, ಪರವಾನಗಿ ನವೀಕರಣದಲ್ಲಿ ವಿಳಂಬ ಮಾಡುವುದು ಅಥವಾ ನಿಗದಿತ ಮಿತಿಗಿಂತ ಹೆಚ್ಚಿನ ಅಂತರ್ಜಲ ಬಳಸುವುದಕ್ಕಾಗಿ ಕೈಗಾರಿಕೆಗಳು, ಮೂಲಸೌಕರ್ಯ ಯೋಜನೆಗಳು, ಗಣಿಗಾರಿಕೆ ಘಟಕಗಳು ಮತ್ತು ಇತರ ಅಂತರ್ಜಲ ಬಳಕೆದಾರರಿಗೆ ವಿಧಿಸಲಾಗುವ ಪರಿಸರ ಪರಿಹಾರ ದಂಡದಲ್ಲಿ ಶೇ. 30 ರಿಂದ ಶೇ. 75 ರವರೆಗೆ ವಿನಾಯಿತಿ ನೀಡುತ್ತದೆ.

ಕೇಂದ್ರ ಜಲಶಕ್ತಿ ಸಚಿವಾಲಯವು ನವೆಂಬರ್ 12ರಂದು, ಅಂತರ್ಜಲ ಶುಲ್ಕಗಳ (ವಿವಾದ ಪರಿಹಾರ) ಯೋಜನೆ, 2026ರ ಅಧಿಸೂಚನೆ ಹೊರಡಿಸಿದೆ. ತಮ್ಮ ಅಂತರ್ಜಲ ಬಳಕೆಯನ್ನು ಸಕ್ರಮಗೊಳಿಸುವಂತೆ ಯೋಜನಾ ಪ್ರವರ್ತಕರನ್ನು ಪ್ರೋತ್ಸಾಹಿಸುವುದು, ಹೆಚ್ಚಿನ ಅಂತರ್ಜಲ ಬಳಕೆದಾರರನ್ನು ನಿಯಂತ್ರಣ ಚೌಕಟ್ಟಿನೊಳಗೆ ತರುವುದು ಹಾಗೂ ಪರಿಸರ ಪರಿಹಾರಕ್ಕೆ ಸಂಬಂಧಿಸಿದ ವಿವಾದಗಳು ಮತ್ತು ಬಾಕಿ ಇರುವ ಮೊಕದ್ದಮೆಗಳ ಇತ್ಯರ್ಥಕ್ಕೆ ಅನುವು ಮಾಡಿಕೊಡುವ ಗುರಿಯನ್ನು ಇದು ಹೊಂದಿದೆ.

ಈ ಯೋಜನೆಯು ಗಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ ಹಾಗೂ ಕೇಂದ್ರ ಅಂತರ್ಜಲ ಪ್ರಾಧಿಕಾರ (ಸಿಜಿಡಬ್ಲ್ಯುಎ)ದಿಂದ ಅಂತರ್ಜಲ ನಿಯಂತ್ರಣ ನಡೆಯುತ್ತಿರುವ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಯೋಜನೆಗಳಿಗೆ ಅನ್ವಯವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಾಜೇಶ್ ಹಳೆಯಂಗಡಿ , ವಾರ್ತಾಭಾರತಿ

contributor