VB-G Ram G ಜಾರಿಯಿಂದ ರಾಜ್ಯಗಳ ಆರ್ಥಿಕ ಹೊರೆ 6 ಪಟ್ಟು ಹೆಚ್ಚಳ: PRS ವರದಿ
Photo Credit : idronline.org
ಹೊಸದಿಲ್ಲಿ: ಪಿಆರ್ಎಸ್ ಲೆಜಿಸ್ಲೇಟಿವ್ ರೀಸರ್ಚ್ ವರದಿಯ ಪ್ರಕಾರ, 2025-26ರಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಗಳು 5,261 ಕೋಟಿ ರೂ.ಖರ್ಚು ಮಾಡಿದ್ದು, ಹೊಸ ‘ವಿಬಿ-ಜಿ ರಾಮ್ ಜಿ’ ಯೋಜನೆ ಜಾರಿಯಿಂದ ರಾಜ್ಯಗಳ ಹೊರೆ ಆರು ಪಟ್ಟು ಹೆಚ್ಚು,ಅಂದರೆ ಸುಮಾರು 33,000 ಕೋಟಿ ಆಗುತ್ತಿತ್ತು ಎಂದು ವರದಿಯು ಹೇಳಿದೆ.
ಕೇಂದ್ರ ಮತ್ತು ರಾಜ್ಯಗಳ ನಡುವಿನ ವೆಚ್ಚ ಹಂಚಿಕೆ ಮಾದರಿಯಲ್ಲಿ ಆಗಿರುವ ಬದಲಾವಣೆಯೇ ರಾಜ್ಯಗಳ ಮೇಲಿನ ಆರ್ಥಿಕ ಹೊರೆಗೆ ಕಾರಣವಾಗಿದೆ. ಮನರೇಗಾ ಅಡಿ ಸಂಪೂರ್ಣ ವೇತನ ಹಾಗೂ ಶೇ. 75ರಷ್ಟು ಸಾಮಗ್ರಿಗಳ ವೆಚ್ಚವನ್ನು ಕೇಂದ್ರವೇ ಭರಿಸುತ್ತಿತ್ತು. ಆದರೆ, ಜುಲೈ 1,2026ರಿಂದ ಜಾರಿಗೆ ಬಂದಿರುವ ‘ವಿಬಿ-ಜಿ ರಾಮ್ ಜಿ’ ಅಡಿ ವೇತನ, ಸಾಮಗ್ರಿ ಮತ್ತು ಆಡಳಿತಾತ್ಮಕ ವೆಚ್ಚಗಳ ಶೇ.40 ರಷ್ಟನ್ನು ರಾಜ್ಯಗಳು ಭರಿಸಬೇಕು ಮತ್ತು ಕೇಂದ್ರವು ಶೇ.60ರಷ್ಟನ್ನು ನೀಡುತ್ತದೆ (ಹಿಮಾಲಯನ್ ಹಾಗೂ ಈಶಾನ್ಯ ರಾಜ್ಯಗಳಿಗೆ ಇದು 90:10ರಷ್ಟಿದೆ).
ಈ ಹೊಸ ಹಣಕಾಸು ವ್ಯವಸ್ಥೆಯಿಂದಾಗಿ ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯಗಳಲ್ಲಿ ಹೆಚ್ಚುವರಿ ಹೊರೆ ತಲಾ ಸುಮಾರು 2,000 ರಿಂದ 3,000 ಕೋಟಿ ರೂ.ವರೆಗೆ ಹೆಚ್ಚಾಗುತ್ತಿತ್ತು ಎಂದು ವರದಿ ತಿಳಿಸಿದೆ.
ಮನರೇಗಾ 2024-25ರಲ್ಲಿ 2.91 ಶತಕೋಟಿ ಮಾನವ ದಿನಗಳನ್ನು ಸೃಷ್ಟಿಸಿತ್ತು. ಆದರೆ 2025-26ರಲ್ಲಿ 100 ದಿನಗಳ ಉದ್ಯೋಗ ಖಾತರಿಯ ಬದಲು ಪ್ರತಿ ಕುಟುಂಬಕ್ಕೆ ಲಭಿಸಿದ ಸರಾಸರಿ ಕೆಲಸದ ದಿನಗಳು 43ಕ್ಕೆ ಕುಸಿದಿದ್ದು, ಕೇವಲ ಶೇ.4ರಷ್ಟು ಕುಟುಂಬಗಳು ಮಾತ್ರ ಪೂರ್ಣ 100 ದಿನಗಳ ಕೆಲಸ ಪಡೆದಿದ್ದವು.
ಹೊಸ ವ್ಯವಸ್ಥೆಯು ಉದ್ಯೋಗ ಖಾತರಿಯನ್ನು 125 ದಿನಗಳಿಗೆ ಹೆಚ್ಚಿಸಿದ್ದರೂ, ಕೇಂದ್ರದ ಕೊಡುಗೆಯು 16ನೇ ಹಣಕಾಸು ಆಯೋಗದ ಸೂತ್ರದ ಆಧಾರದ ಮೇಲೆ ರಾಜ್ಯವಾರು ಹಂಚಿಕೆಗೆ ಒಳಪಟ್ಟಿರುತ್ತದೆ. ಇದರೊಂದಿಗೆ, ಕೃಷಿ ಚಟುವಟಿಕೆಗಳ ಉತ್ತುಂಗದ ಸಮಯದಲ್ಲಿ 60 ದಿನಗಳವರೆಗೆ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ರಾಜ್ಯಗಳಿಗೆ ಹೊಸ ಕಾನೂನು ಅವಕಾಶ ಕಲ್ಪಿಸುತ್ತದೆ.
‘ವಿಬಿ-ಜಿ ರಾಮ್ ಜಿ’ ಯೋಜನೆ ಜಾರಿಗೊಂಡ ಬಳಿಕ ಸುಮಾರು 46 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ ಎಂದು ಕೇಂದ್ರ ಸರಕಾರವು ತಿಳಿಸಿದೆ. 2026-27ನೇ ಸಾಲಿನಲ್ಲಿ ಈ ಯೋಜನೆಗಾಗಿ ಕೇಂದ್ರವು 95,692 ಕೋಟಿ ಮೀಸಲಿಟ್ಟಿದ್ದು, ರಾಜ್ಯಗಳ ಕೊಡುಗೆಯನ್ನೂ ಸೇರಿಸಿದರೆ ಒಟ್ಟು ಮೊತ್ತವು 1.51 ಲಕ್ಷ ಕೋಟಿ ರೂ.ದಾಟಲಿದೆ.
ಹಳೆಯ ಮನರೇಗಾ ಅಡಿಯಲ್ಲಿ ಪ್ರತಿ ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಉದ್ಯೋಗ ಖಾತರಿಯನ್ನು ಒದಗಿಸಲಾಗಿತ್ತು. ಅದನ್ನು ಬೇಡಿಕೆ ಚಾಲಿತ ಕಾರ್ಯಕ್ರಮವಾಗಿ ರೂಪಿಸಲಾಗಿತ್ತು.