Meta, Instagram ಜಾಗತಿಕ ಮುಖ್ಯಸ್ಥರಿಗೆ ಕೇಂದ್ರ ಸರಕಾರ ಸಮನ್ಸ್ ನೀಡಿದ್ದೇಕೆ?

Update: 2026-07-28 16:34 IST

 ಜೋಯಲ್ ಕಪ್ಲಾನ್ (meta.com) , ಆಡಮ್ ಮೊಸ್ಸೆರಿ ( @mosseri \ Instagram)

ಹೊಸದಿಲ್ಲಿ : ಮೆಟಾ ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೊವನ್ನು ನಿರ್ಬಂಧಿಸಿದ ಬೆನ್ನಲ್ಲೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೆಟಾದ ಜಾಗತಿಕ ಮುಖ್ಯಸ್ಥ ಜೋಯಲ್ ಕಪ್ಲಾನ್ ಮತ್ತು ಇನ್ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಅವರಿಗೆ ಸಮನ್ಸ್ ನೀಡಿದೆ.

ಭಾರತೀಯ ನೀತಿ ತಂಡವು ಈ ವಿಷಯದ ಗಂಭೀರತೆಯನ್ನು ಅಮೆರಿಕದ ತಂಡಕ್ಕೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಪ್ಲಾನ್ ಮತ್ತು ಮೊಸ್ಸೆರಿಗೆ ಇ-ಮೇಲ್ ಮೂಲಕ ಸಮನ್ಸ್ ಕಳುಹಿಸಲಾಗಿದೆ ಎಂದು ಐಟಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು hindustantimes.com ವರದಿಯು ತಿಳಿಸಿದೆ.

"ಇನ್ಸ್ಟಾಗ್ರಾಮ್‌ನಿಂದ ಪ್ರಧಾನಿ ಮೋದಿ ಅವರ ವಿಡಿಯೋ ತೆಗೆದು ಹಾಕಿರುವುದು ಒಂದು ವಿಷಯ. ಇದರ ಜೊತೆಗೆ ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕೃತಕವಾಗಿ ಸೃಷ್ಟಿಸಿದ ವಿಷಯಗಳು, ಐಟಿ ನಿಯಮಗಳ ಉಲ್ಲಂಘನೆ ಬಗ್ಗೆ ಚರ್ಚೆ ನಡೆಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬಯಸಿದೆ" ಎಂದು ಸಚಿವಾಲಯವು ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ನಿರ್ಬಂಧಿಸಿರುವ ಕುರಿತು ಮೆಟಾ ಸ್ಪಷ್ಟನೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ಸಮನ್ಸ್ ನೀಡಲಾಗಿದೆ.

ತಾಂತ್ರಿಕ ದೋಷದಿಂದ ಈ ವೀಡಿಯೊ ಫೇಸ್‌ಬುಕ್‌ ನಲ್ಲಿ ಕಂಡು ಬಂದಿಲ್ಲ. ಬಳಿಕ ವೀಡಿಯೊವನ್ನು ಮರು ಸ್ಥಾಪಿಸಲಾಗಿದೆ ಎಂದು ಮೆಟಾದ ವಕ್ತಾರರು ಹೇಳಿದ್ದಾರೆ.

ಈ ವಿಡಿಯೊವನ್ನು ಪ್ರಧಾನಿ ಮೋದಿ ಕಳೆದ ಗುರುವಾರ ಮಧ್ಯರಾತ್ರಿಯ ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ನೀಟ್‌ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಾರ್ವಜನಿಕರಲ್ಲಿ ವ್ಯಕ್ತವಾಗಿದ್ದ ಆತಂಕ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗಳ ನಡುವೆಯೇ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಈ ವಿಡಿಯೋದಲ್ಲಿ ನೇರ ಸಂದೇಶ ನೀಡಿದ್ದರು. ಪರೀಕ್ಷಾ ಅಕ್ರಮದ ಬಗ್ಗೆ ಸರಕಾರದ ನಿಲುವು ವಿವರಿಸುವ ಜೊತೆಗೆ ಶಾಂತಿ ಕಾಪಾಡುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಭರವಸೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News