E20 ಪೆಟ್ರೋಲ್ ಎಥೆನಾಲ್ ಮಿಶ್ರಣರಹಿತ ಇಂಧನಕ್ಕಿಂತಲೂ ಹೆಚ್ಚು ಉತ್ಕೃಷ್ಟ, ಪರಿಶುದ್ಧ : ಕೇಂದ್ರ ಸರಕಾರ ಪ್ರತಿಪಾದನೆ
ಸಾಂದರ್ಭಿಕ ಚಿತ್ರ | Photo Credit : magnific.com
ಹೊಸದಿಲ್ಲಿ,ಜು.10: ಎಥೆನಾಲ್ ಮಿಶ್ರಣ ರಹಿತ ಇಂಧನಗಳಿಗಿಂತಲೂ ಎಥೆನಾಲ್ ಮಿಶ್ರಣವಿರುವ ಇ20 ಪೆಟ್ರೋಲ್, ಹೆಚ್ಚು ಪರಿಶುದ್ಧವಾಗಿದೆ ಹಾಗೂ ಉತ್ಕೃಷ್ಟವಾಗಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ಪ್ರತಿಪಾದಿಸಿದೆ. ಎಥೆನಾಲ್ ಮಿಶ್ರಣವು ಇಂಧನದ ಮೈಲೇಜ್ ಅನ್ನು ಕಡಿಮೆಗೊಳಿಸುತ್ತದೆ ಹಾಗೂ ವಾಹನಗಳ ಯಂತ್ರಗಳಿಗೆ ಹಾನಿಕರವಾಗಿದೆ ಎಂದು ವಾಹನಮಾಲಕರು ದೂರತೊಡಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಸ್ಪಷ್ಟನೆ ನೀಡಿದೆ.
‘‘ಶೇ.20ರಷ್ಟು ಎಥೆನಾಲ್ ಹೊಂದಿರುವ ಇ20 ಪೆಟ್ರೋಲ್, ಪರಿಶುದ್ಧ, ಸ್ವಚ್ಛ ಮತ್ತು ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಇಂಧನವಾಗಿದ್ದು, ಅದನ್ನು ಭಾರತೀಯ ಗ್ರಾಹಕರು ಆತ್ಮವಿಶ್ವಾಸದೊಂದಿಗೆ ಬಳಸಬಹುದಾಗಿದೆ’’ ಎಂದು ಪೆಟ್ರೋಲಿಯಂ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇ20 ಪೆಟ್ರೋಲ್‌ನ ಗುಣಮಟ್ಟ, ಸುರಕ್ಷತೆ ಹಾಗೂ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಆಟೋಮೊಬೈಲ್‌ಗಳ ತಯಾರಕ ಕಂಪೆನಿಗಳು, ಪರೀಕ್ಷಾ ಏಜೆನ್ಸಿಗಳು, ತೈಲ ಮಾರಾಟ ಸಂಸ್ಥೆಗಳು ಹಾಗೂ ನಿಯಂತ್ರಣ ಪ್ರಾಧಿಕಾರಗಳು ಕೂಡಾ ದೃಢಪಡಿಸಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪೆಟ್ರೋಲಿಯಂ ಸಚಿವಾಲಯ ‘ಎಥೆನಾಲ್ ಮಿಶ್ರಿತ ಪೆಟ್ರೋಲ್ ಯೋಜನೆ’ಯು ಶೇ.20ರಷ್ಟು ಎಥೆನಾಲ್ ಅನ್ನು ಪೆಟ್ರೋಲ್‌ಗೆ ಮಿಶ್ರಣಗೊಳಿಸುವುದನ್ನು ಕಡ್ಡಾಯಗೊಳಿಸಿದೆ.