ಬ್ರೌನ್‌ಶುಗರ್ ಪತ್ತೆ ಪ್ರಕರಣ |ಪೊಲೀಸರಿಂದ ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಹೋದರನ ವಿಚಾರಣೆ
ನಾನಾ ಪಟ್ವಾರಿ | Photo Credit : nana_patwari \ instagram.com
ಇಂದೋರ್,ಜು.10: ಬ್ರೌನ್‌ಶುಗರ್ ಮಾದಕದ್ರವ್ಯ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೋರ್ ಪೊಲೀಸರು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರ ಕಿರಿಯ ಸಹೋದರ ನಾನಾ ಪಟ್ವಾರಿ ಸೇರಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಮಗೆ ಲಭ್ಯವಾದ ವಿಶ್ವಾಸನೀಯ ಮಾಹಿತಿಯ ಆಧಾರದಲ್ಲಿ ಇಂದೋರ್ ಪೊಲೀಸರು ಗುರುವಾರ ಇರ್ಫಾನ್‌ಖಾನ್ ಯಾನೆ ಗೋಲು ಚಾಂದೇರಿ ಹಾಗೂ ಸಂಜಯ್ ಕೌಶಲ್ ಎಂಬವರನ್ನು ಅವರಿಂದ 10.8 ಗ್ರಾಂ. ಮಾದಕದ್ರವ್ಯ ಹಾಗೂ ಎಸ್‌ಯುವಿ ವಾಹನವೊಂದನ್ನು ವಶಪಡಿಸಿಕೊಂಡಿದ್ದರು.
ತಾವು ನಾನಾಪಟ್ವಾರಿ ಹಾಗೂ ಕುಲಭೂಷಣ್ ಪಟ್ವಾರಿಗೆ ಬ್ರೌನ್‌ಶುಗರ್ ಪೂರೈಕೆ ಮಾಡಲು ತೆರಳುತ್ತಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು.
ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ನಾನಾಪಟ್ವಾರಿ ಹಾಗೂ ಕುಲಭೂಷಣ್ ಪಟ್ವಾರಿಯನ್ನು ಗುರುವಾರ ರಾತ್ರಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ, ಆನಂತರ ಬಿಡುಗಡೆಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಹಾಗೂ ಆರ್ಥಿಕ ವಹಿವಾಟಿನ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಉಪ ಆಯುಕ್ತ ನರೇಂದ್ರ ರಾವತ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕದ್ರವ್ಯ ಹಾಗೂ ಚಿತ್ತಭ್ರಾಮಕ ಪದಾರ್ಥಗಳ ಕಾಯ್ದೆಯಡಿ ಎಫ್‌ಎಐಆರ್ ದಾಖಲಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ತನ್ನ ಸೋದರನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಜಿತು ಪಟ್ವಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಆಡಳಿತಾರೂಢ ಬಿಜೆಪಿ ಸರಕಾರವು ಸೇಡಿನ ರಾಜಕಾರಣ ನಡೆಸುತ್ತಿದೆಯೆಂದು ಆಪಾದಿಸಿದ್ದಾರೆ.