Photo Credit : NDTV 

ರಾಯಪುರ, ನ. 24: ನ್ಯಾಯಾಧೀಶರು ಮತ್ತು ಅಧಿಕಾರಿಗಳನ್ನು ನಿರ್ವಹಿಸುವ ಭರವಸೆ ನೀಡಿ ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಹಗರಣದ ಮುಖ್ಯ ಸೂತ್ರಧಾರ ಎನ್ನಲಾದ ಸೌರಭ್ ಚಂದ್ರಾಕರ್‌ ನಿಂದ 15 ಕೋ. ರೂ.ಗೂ ಹೆಚ್ಚು ಹಣ ಪಡೆದ ಆರೋಪದಲ್ಲಿ ದಿಲ್ಲಿ ಮೂಲದ ವಕೀಲನನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ.

ಮುಂಬೈ ನ್ಯಾಯಾಲಯ ಆರೋಪಿಯ ವರ್ಗಾವಣೆ ರಿಮಾಂಡ್ ಅರ್ಜಿಯನ್ನು ತಿರಸ್ಕರಿಸಿ ನೀಡಿದ್ದ ಆದೇಶವನ್ನು ಬಾಂಬೆ ಉಚ್ಚ ನ್ಯಾಯಾಲಯ ರದ್ದುಗೊಳಿಸಿದ ಬೆನ್ನಲ್ಲೇ, ಇಲ್ಲಿನ ವಿಶೇಷ ಪಿಎಂಎಲ್ಎ ನ್ಯಾಯಾಲಯ ಸೋಮವಾರ ತಡರಾತ್ರಿ ಆರೋಪಿ ಹಿಮಾಂಶು ಶೇಖರ್ ನನ್ನು ನ. 28ರವರೆಗೆ ED ಕಸ್ಟಡಿಗೆ ಒಪ್ಪಿಸಿದೆ ಎಂದು ತನಿಖಾ ಸಂಸ್ಥೆಯ ವಕೀಲ ಸೌರಭ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ED ನಡೆಸಿದ ಕಸ್ಟಡಿ ವಿಚಾರಣೆಯ ಸಂದರ್ಭದಲ್ಲಿ ಸೌರಭ್ ಚಂದ್ರಾಕರ್‌, ಶೇಖರ್ ನ ಹೆಸರನ್ನು ಉಲ್ಲೇಖಿಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಮತ್ತು ವಕೀಲರು ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿರುವವರು ಹಾಗೂ ಸರಕಾರಿ ಅಧಿಕಾರಿಗಳನ್ನು ನಿರ್ವಹಿಸುವುದಾಗಿ ಶೇಖರ್ ಭರವಸೆ ನೀಡಿದ್ದ ಎಂದು ಆತ ಆರೋಪಿಸಿದ್ದಾನೆ.

ಸೌರಭ್ ಚಂದ್ರಾಕರ್‌ ತನಿಖಾಧಿಕಾರಿಗಳಿಗೆ ತಾನು 15 ಕೋ. ರೂ. ನೀಡಿರುವುದಾಗಿ ಮತ್ತು ನಂತರ ಸಣ್ಣ ಕಂತುಗಳಲ್ಲಿ ಹಣ ಪಾವತಿಸಿರುವುದಾಗಿ ತಿಳಿಸಿದ್ದಾನೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ವಕೀಲನ ವಿರುದ್ಧ ಲುಕೌಟ್ ಸರ್ಕ್ಯುಲರ್ ಹೊರಡಿಸಿತ್ತು ಎಂದು ಪಾಂಡೆ ತಿಳಿಸಿದ್ದಾರೆ.

ನ. 20ರಂದು ಮಧ್ಯಾಹ್ನ 3 ಗಂಟೆಗೆ ದುಬೈಗೆ ವಿಮಾನವೇರಲು ಸಜ್ಜಾಗಿದ್ದ ಶೇಖರ್ ನನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಆತನನ್ನು ಕಸ್ಟಮ್ಸ್ ಇಲಾಖೆಗೆ ಒಪ್ಪಿಸಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು LOC ಕುರಿತು EDಗೆ ಮಾಹಿತಿ ನೀಡಿದ್ದರು ಎಂದು ಪಾಂಡೆ ತಿಳಿಸಿದ್ದಾರೆ.

ರಾಯಪುರದ ED ಅಧಿಕಾರಿಗಳು ಮುಂಬೈಗೆ ತಲುಪಿ ನ. 21ರಂದು ಬೆಳಗಿನ ಜಾವ 1.10ರ ಸುಮಾರಿಗೆ ಶೇಖರ್ ನನ್ನು ವಶಕ್ಕೆ ಪಡೆದರು. ಆತನನ್ನು ವಿಚಾರಣೆಗೆ ಒಳಪಡಿಸಿದ ಬಳಿಕ, ED ಅದೇ ದಿನ ಅಪರಾಹ್ನ 2.45ರ ಸುಮಾರಿಗೆ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಆತನನ್ನು ರಾಯಪುರಕ್ಕೆ ಕರೆದೊಯ್ಯಲು ವರ್ಗಾವಣೆ ರಿಮಾಂಡ್ ಕೋರಿತು.

ಆದರೆ, ಆರೋಪಿಯನ್ನು 24 ಗಂಟೆಗಳ ಅವಧಿಯ ಕೊನೆಯಲ್ಲಿ ಹಾಜರುಪಡಿಸುವ ಬದಲು, ನ್ಯಾಯಾಲಯದ ಕೆಲಸದ ಅವಧಿಯ ಮೊದಲ ಹಂತದಲ್ಲೇ ಹಾಜರುಪಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟ ಮುಂಬೈ ನ್ಯಾಯಾಲಯ ವರ್ಗಾವಣೆ ರಿಮಾಂಡ್ ಅರ್ಜಿಯನ್ನು ತಿರಸ್ಕರಿಸಿತು ಎಂದು ಪಾಂಡೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಮೇಶ್ ಯು , ವಾರ್ತಾಭಾರತಿ

contributor