Photo Credit : X 

ಹೊಸದಿಲ್ಲಿ: ಬಿಸ್ಲೇರಿ ಪ್ಯಾಕೇಜ್ಡ್ ಕುಡಿಯುವ ನೀರಿನ ಒಂದು ಮಾದರಿಗೆ ಮಾತ್ರ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಪ್ರಯೋಗಾಲಯ ಪರೀಕ್ಷೆಯಲ್ಲಿ 'ಅಸುರಕ್ಷಿತ' ಎಂದು ಘೋಷಣೆಯಾದ ಬೆನ್ನಲ್ಲೇ, ತನ್ನ ಕುಡಿಯುವ ನೀರಿನ ಉತ್ಪನ್ನಗಳು ಸೇವನೆಗೆ ಸುರಕ್ಷಿತವಾಗಿವೆ ಎಂದು ಬಿಸ್ಲೇರಿ ಕಂಪೆನಿ ಮಂಗಳವಾರ ಸ್ಪಷ್ಟಪಡಿಸಿದೆ.

FSSAI ವಿಧಿಸಿರುವ ಮಾರಾಟ ನಿಷೇಧವು 2025ರ ಸೆ. 27ರಂದು ಗೋವಾದಲ್ಲಿ ತಯಾರಾದ 'GO 270' ಎಂಬ ಒಂದೇ ಒಂದು ಬ್ಯಾಚ್ ಗೆ ಮಾತ್ರ ಅನ್ವಯಿಸುತ್ತದೆ. ಈ ಬ್ಯಾಚ್ ನ ಯಾವುದೇ ದಾಸ್ತಾನು ಪ್ರಸ್ತುತ ಮಾರುಕಟ್ಟೆಯಲ್ಲಿ ಇಲ್ಲ ಎಂದು ಕಂಪೆನಿ ತಿಳಿಸಿದೆ.

FSSAI ಪರೀಕ್ಷೆಗಾಗಿ ಬಿಸ್ಲೇರಿಯ ನೀರಿನ ಆರು ಮಾದರಿಗಳನ್ನು ಸಂಗ್ರಹಿಸಿತ್ತು. ಆರಂಭಿಕ ಪ್ರಯೋಗಾಲಯ ಪರೀಕ್ಷೆಯಲ್ಲಿ ಆರು ಮಾದರಿಗಳೂ ಉತ್ತೀರ್ಣವಾಗಿದ್ದವು. ಆದರೆ, ಮರುಪರೀಕ್ಷೆಯ ವೇಳೆ 'GO 270' ಬ್ಯಾಚ್ ನ ಒಂದು ಮಾದರಿಯಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳ (PAH) ಪ್ರಮಾಣವು ಪ್ರತಿ ಲೀಟರ್ ಗೆ 0.144 ಮಿಲಿಗ್ರಾಂಗಿಂತ ಹೆಚ್ಚಿರುವುದು ಪತ್ತೆಯಾಗಿತ್ತು ಎಂದು ಕಂಪೆನಿ ಹೇಳಿದೆ.

ಕುಡಿಯುವ ನೀರಿನಲ್ಲಿ PAH ಅಂಶಗಳು ಪತ್ತೆಯಾಗುವ ಮಟ್ಟದಲ್ಲಿರುವುದಕ್ಕೆ FSSAI ಮಾರಾಟಕ್ಕೆ ಅನುಮತಿ ನೀಡುವುದಿಲ್ಲ.

ಇದೇ ಬ್ಯಾಚ್ ನ ಮತ್ತೊಂದು ಮಾದರಿಯ ಪರೀಕ್ಷೆಯಲ್ಲಿ ಎಲ್ಲ ಮಾನದಂಡಗಳೂ ಪೂರೈಕೆಯಾಗಿದ್ದು, ಯಾವುದೇ ದೋಷ ಕಂಡುಬಂದಿಲ್ಲ ಎಂದು ಕಂಪೆನಿ ತಿಳಿಸಿದೆ. ಒಂದೇ ಬ್ಯಾಚ್ ನ ಎರಡು ಮಾದರಿಗಳ ಪರೀಕ್ಷಾ ಫಲಿತಾಂಶಗಳಲ್ಲಿ ಕಂಡುಬಂದ ವ್ಯತ್ಯಾಸವನ್ನು ಉಲ್ಲೇಖಿಸಿ, 2026ರ ಫೆಬ್ರವರಿಯಲ್ಲಿ ಮರುಪರೀಕ್ಷೆ ನಡೆಸುವಂತೆ FSSAIಗೆ ಮನವಿ ಮಾಡಿದ್ದಾಗಿ ಹೇಳಿದೆ.

"ಬಿಸ್ಲೇರಿ FSSAIಯೊಂದಿಗೆ ಸಹಕರಿಸುವುದನ್ನು ಮುಂದುವರಿಸಲಿದೆ. ಯಾವುದೇ ವಿಚಾರಣೆಯಲ್ಲಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲಿದೆ. ಅಂದಿನಿಂದ ಬಿಸ್ಲೇರಿ ಘಟಕಗಳಲ್ಲಿ FSSAI ಪರೀಕ್ಷಿಸಿದ ಯಾವುದೇ ಮಾದರಿಯಲ್ಲೂ PAH ಅಂಶಗಳು ಪತ್ತೆಯಾಗಿಲ್ಲ" ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಅಡಿಯಲ್ಲಿ ಬಿಸ್ಲೇರಿ ಇಂಟರ್ನ್ಯಾಷನಲ್ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿರುವುದಾಗಿ FSSAI ತಿಳಿಸಿತ್ತು.

2025ರ ಸೆ. 30ರಂದು ಕಂಪೆನಿಯ ಗೋವಾ ಘಟಕದಿಂದ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಮೊದಲ ಹಂತದ ಪರೀಕ್ಷೆಯಲ್ಲಿ ಪ್ರತಿ ಲೀಟರ್ ಗೆ 12 ಮೈಕ್ರೋಗ್ರಾಂಗಳಷ್ಟು ಬ್ರೋಮೇಟ್ ಪತ್ತೆಯಾಗಿತ್ತು. ಇದರ ನಿಗದಿತ ಗರಿಷ್ಠ ಮಿತಿ ಪ್ರತಿ ಲೀಟರ್ ಗೆ 10 ಮೈಕ್ರೋಗ್ರಾಂಗಳಾಗಿದೆ.

ನಂತರದ ಪ್ರಯೋಗಾಲಯದ ಪರೀಕ್ಷೆಯಲ್ಲಿ ಬ್ರೋಮೇಟ್ ಪ್ರಮಾಣವು ನಿಗದಿತ ಮಿತಿಯೊಳಗೆ ಇರುವುದು ಕಂಡುಬಂದಿತ್ತು. ಆದರೆ, PAH ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಾದರಿಯನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು.

FSSAI ಅನುಮೋದಿತ ಸ್ವತಂತ್ರ ಪ್ರಯೋಗಾಲಯದ ಪರೀಕ್ಷೆಯಲ್ಲೂ ಬ್ರೋಮೇಟ್ ಪ್ರಮಾಣವು ನಿಗದಿತ ಮಿತಿಯೊಳಗೇ ಇರುವುದು ದೃಢಪಟ್ಟಿದೆ ಎಂದು ಬಿಸ್ಲೇರಿ ಹೇಳಿದೆ. ಈ ಕುರಿತು ತನಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ. ಪರೀಕ್ಷೆಗೆ ಒಳಪಡಿಸಲಾದ ಮಾದರಿಯು ಸುಮಾರು 14 ತಿಂಗಳ ಹಿಂದಿನದು ಎಂದೂ ಕಂಪೆನಿ ತಿಳಿಸಿದೆ.

ನೀರಿನ ಸಂಸ್ಕರಣೆಯ ಸಂದರ್ಭದಲ್ಲಿ, ವಿಶೇಷವಾಗಿ ಸೂಕ್ಷ್ಮಜೀವಿಗಳನ್ನು ನಾಶಪಡಿಸಲು ಓಝೋನ್ ಬಳಸಿದಾಗ ಬ್ರೋಮೇಟ್ ರೂಪುಗೊಳ್ಳಬಹುದು. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಬ್ರೋಮೇಟ್ ಅನ್ನು ಗ್ರೂಪ್ 2B ವರ್ಗಕ್ಕೆ ಸೇರಿಸಿದೆ. ಅಂದರೆ, ಪ್ರಾಣಿಗಳ ಮೇಲಿನ ಅಧ್ಯಯನಗಳ ಆಧಾರದಲ್ಲಿ ಇದು ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆಯಿರುವ ವಸ್ತುವೆಂದು ವರ್ಗೀಕರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.