ಜಂತರ್ ಮಂತರ್ ನಲ್ಲಿ CJP ಪ್ರತಿಭಟನೆ ವೇಳೆ ದೀಪ್ಕೆಗೆ ಬ್ಯಾಡ್ಜ್ ಹಸ್ತಾಂತರಿಸಿ 'ರಾಜೀನಾಮೆ' ಘೋಷಿಸಿದ ಕಾನ್ ಸ್ಟೇಬಲ್; ಈ ಬಗ್ಗೆ ಉತ್ತರಾಖಂಡ ಪೊಲೀಸರು ಹೇಳಿದ್ದೇನು?

“ಉತ್ತರಾಖಂಡದಲ್ಲಿ ಪಟ್ವಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ದಿನಸಿ ಅಂಗಡಿಗಳಲ್ಲೂ ಲಭ್ಯ”

Update: 2026-07-25 00:14 IST

Screengrab : x 

ಹೊಸದಿಲ್ಲಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಜಂತರ್ ಮಂತರ್ ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉತ್ತರಾಖಂಡ ಪೊಲೀಸ್ ಕಾನ್ ಸ್ಟೇಬಲ್ ಶೇರ್ ಸಿಂಗ್, ತಮ್ಮ ಪೊಲೀಸ್ ಬ್ಯಾಡ್ಜ್ ಅನ್ನು ಕಾಕ್ರೋಚ್ ಜನತಾ ಪಾರ್ಟಿ (CJP)ಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಹಸ್ತಾಂತರಿಸಿ, ಪೊಲೀಸ್ ಸೇವೆಗೆ 'ರಾಜೀನಾಮೆ' ನೀಡುವುದಾಗಿ ಘೋಷಿಸಿದರು. ಆದರೆ, ಈ ಬೆಳವಣಿಗೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉತ್ತರಾಖಂಡ ಪೊಲೀಸರು, ಶೇರ್ ಸಿಂಗ್ ಅವರು ಈಗಾಗಲೇ ಅಮಾನತುಗೊಂಡಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನಾಕಾರರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ ಶೇರ್ ಸಿಂಗ್, ಉತ್ತರಾಖಂಡದಲ್ಲಿ ಪಟ್ವಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ದಿನಸಿ ಅಂಗಡಿಗಳಲ್ಲಿಯೂ ಲಭ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. 2021ರಿಂದ ರಾಜ್ಯದಲ್ಲಿ ನಡೆದಿರುವ ವಿವಿಧ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಇದೇ ಕಾರಣಕ್ಕೆ ಪೊಲೀಸ್ ಸೇವೆ ತೊರೆಯುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.

"ಇದು ಭಗತ್ ಸಿಂಗ್ ಅವರ ದೇಶ. ಕ್ರಾಂತಿ ಬಾಂಬ್ ಅಥವಾ ಪಿಸ್ತೂಲ್ ಗಳಿಂದ ಬರುವುದಿಲ್ಲ. ನಾವು ಈ ಗೂಂಡಾಗಳನ್ನು ಎದುರಿಸುತ್ತೇವೆ. ಕ್ರಾಂತಿಯು ಆಲೋಚನೆಗಳಿಂದ ಬರುತ್ತದೆ ಮತ್ತು ಆಲೋಚನೆಗಳು ಎಂದಿಗೂ ಸಾಯುವುದಿಲ್ಲ" ಎಂದು ಹೇಳಿದ ಅವರು, ತಮ್ಮ ಪೊಲೀಸ್ ಬ್ಯಾಡ್ಜ್ ಅನ್ನು ಅಭಿಜೀತ್ ದೀಪ್ಕೆ ಅವರಿಗೆ ಹಸ್ತಾಂತರಿಸಿದರು.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಉತ್ತರಾಖಂಡ ಪೊಲೀಸ್ ಇನ್ಸ್‌ ಪೆಕ್ಟರ್ ಜನರಲ್ ನಿವೇದಿತಾ ಕುಕ್ರೇಟಿ ಪ್ರತಿಕ್ರಿಯಿಸಿ, ಪಿಥೋರಗಢದಲ್ಲಿ ನಿಯೋಜನೆಗೊಂಡಿದ್ದ ಶೇರ್ ಸಿಂಗ್ ಅವರು ಜೂನ್ 28ರಿಂದ ಕರ್ತವ್ಯಕ್ಕೆ ಗೈರಾಗಿದ್ದರು. ಈ ಸಂಬಂಧ ವಿವರಣೆ ಕೋರಿ ನೋಟಿಸ್ ನೀಡಲಾಗಿತ್ತು. ಅವರು ಉತ್ತರಿಸದ ಕಾರಣ ಜುಲೈ 20ರಂದು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಕಳೆದ ವರ್ಷ ಹರಿದ್ವಾರದಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಭೂ ಅತಿಕ್ರಮಣ ಹಾಗೂ ದರೋಡೆಕೋರ ಪ್ರವೀಣ್ ವಾಲ್ಮೀಕಿ ನಡೆಸಿದ ಸಂಘಟಿತ ಅಪರಾಧದಲ್ಲಿ ಭಾಗಿಯಾಗಿರುವ ಆರೋಪದಡಿ ಶೇರ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಅವರನ್ನು ಸೆಪ್ಟೆಂಬರ್ 15ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಹಲವು ತಿಂಗಳುಗಳ ಬಳಿಕ ಅವರಿಗೆ ಜಾಮೀನು ದೊರೆತಿದ್ದು, ಪ್ರಸ್ತುತ ಅವರನ್ನು ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ಕುಕ್ರೇಟಿ ಹೇಳಿದರು.

ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಕುಕ್ರೇಟಿ, 2025ರ ಆಗಸ್ಟ್ 28ರಂದು ಹರಿದ್ವಾರದ ಗಂಗ್ನಹರ್ ಪೊಲೀಸ್ ಠಾಣೆಯಲ್ಲಿ ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಕ್ರಿಮಿನಲ್ ಪಿತೂರಿ ಆರೋಪಗಳಡಿ ಎಫ್ಐಆರ್ ದಾಖಲಾಗಿತ್ತು ಎಂದು ತಿಳಿಸಿದರು.

"ಶೇರ್ ಸಿಂಗ್ ಅವರನ್ನು ವಿಶೇಷ ಕಾರ್ಯಪಡೆ (STF) ಬಂಧಿಸಿತ್ತು. ಅವರನ್ನು ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿತ್ತು. ಅಲ್ಲದೆ, ಅವರು ನಿಯೋಜನೆಗೊಂಡಿದ್ದ ಪೊಲೀಸ್ ಠಾಣೆಯಿಂದ ಅನಧಿಕೃತವಾಗಿ ರಜೆಯ ಮೇಲೆ ತೆರಳಿದ್ದರು" ಎಂದು ಅವರು ಹೇಳಿದರು.

ಶೇರ್ ಸಿಂಗ್ ಅವರು ಪಿಥೋರಗಢಕ್ಕೆ ವರ್ಗಾವಣೆಯಾಗುವ ಮೊದಲು ಡೆಹ್ರಾಡೂನ್ ನಲ್ಲಿ ನಿಯೋಜನೆಗೊಂಡಿದ್ದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News