ಸೋನಂ ವಾಂಗ್ಚುಕ್ ಕುರಿತ ಕೇಂದ್ರದ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ; ಬಿಜೆಪಿ ನಾಯಕರ ಹೇಳಿಕೆ ಮುಂದಿಟ್ಟು ಪ್ರಶ್ನೆಗಳ ಸುರಿಮಳೆ
"ಚೀನಾ ಏಜೆಂಟ್‌ಗೆ ಮೋದಿ, ನಡ್ಡಾ ಕಾಳಜಿ ತೋರಿಸುತ್ತಿರುವುದೇಕೆ?" ಎಂದು ಪ್ರಶ್ನೆ
ಜೆ. ಪಿ. ನಡ್ಡಾ , ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ: ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಕಾಳಜಿ ವ್ಯಕ್ತಪಡಿಸಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದೆ.
NEET ಪತ್ರಿಕೆ ಸೋರಿಕೆ ಹೊಣೆ ಹೊತ್ತು ಸಿಜೆಪಿ ನಡೆಸುತ್ತಿರುವ ಧರಣಿಗೆ ಬೆಂಬಲಿಸಿ, ಸೋನಂ ವಾಂಗ್ಚುಕ್ ಅವರು ಆರಂಭಿಸಿದ ಉಪವಾಸ ಸತ್ಯಾಗ್ರಹದ ಕುರಿತಂತೆ ಉತ್ತರ ಪ್ರದೇಶ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಸೇರಿದಂತೆ ಬಿಜೆಪಿ ಬೆಂಬಲಿಗರು ಸೋನಂ ವಾಂಗ್ಚುಕ್ ಅವರನ್ನು "ಚೀನಾ ಏಜೆಂಟ್", "ಜಾರ್ಜ್ ಸೊರೋಸ್ ಬೆಂಬಲಿತ" ಎಂಬ ಆರೋಪಗಳೊಂದಿಗೆ ಟೀಕಿಸಿದ್ದರು. ಇದೀಗ ಉಪವಾಸ ಸತ್ಯಾಗ್ರಹದ ಬಳಿಕ ಅಸ್ವಸ್ಥಗೊಂಡ ವಾಂಗ್ಚುಕ್ ಅವರನ್ನು ಭೇಟಿ ಮಾಡಿ ಜೆ.ಪಿ. ನಡ್ಡಾ ಆರೋಗ್ಯ ವಿಚಾರಿಸಿರುವುದು ಹಾಗೂ ಪ್ರಧಾನಿ ಮೋದಿ ಶೀಘ್ರ ಗುಣಮುಖರಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ಹಾರೈಸಿರುವುದು ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಯನ್ನು ಉಲ್ಲೇಖಿಸಿ ಹಲವು ಜನರು ಸಾಮಾಜಿಕ ಜಾಲತಾಣದಲ್ಲಿ, "ಒಬ್ಬ ವ್ಯಕ್ತಿ ನಿಜವಾಗಿಯೂ ಚೀನಾ ಏಜೆಂಟ್ ಆಗಿದ್ದರೆ ಪ್ರಧಾನಿ ಹಾಗೂ ಕೇಂದ್ರ ಸಚಿವರು ಏಕೆ ಕಾಳಜಿ ವಹಿಸುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, "ಹಿಂದಿನ ಆರೋಪಗಳಿಗೆ ಈಗ ಬಿಜೆಪಿ ನಾಯಕರು ಉತ್ತರ ನೀಡಬೇಕಾಗಿದೆ" ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಫೇಸ್ಬುಕ್, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ಗಳಲ್ಲಿ, ಬಿಜೆಪಿ ನಾಯಕರ ಹಿಂದಿನ ಹೇಳಿಕೆಗಳ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡು ವ್ಯಂಗ್ಯ ಮಾಡಲಾಗುತ್ತಿದೆ.
ಕಳೆದ ವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ಉತ್ತರಪ್ರದೇಶದ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಕೇಶ್ ಯಾದವ್, "ಸೋನಂ ವಾಂಗ್ಚುಕ್ ಚೀನಾದ ಏಜೆಂಟ್, ಚೀನಾದ ಫಂಡಿಂಗ್ ಪಡೆದು ದಿಲ್ಲಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಇಂತಹವರನ್ನು ನಾವು ಇಲ್ಲವಾಗಿಸುತ್ತೇವೆʼ ಎಂದು ಹೇಳಿದ್ದರು.
ಆದರೂ, ಕೇಂದ್ರ ಸಚಿವ ಜೆಪಿ ನಡ್ಡಾ ಅವರ ಒತ್ತಾಯ ಮೇರೆಗೆ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಸೋನಂ ವಾಂಗ್ಚುಕ್ ಅವರು ಆರೋಗ್ಯದ ಕಾಳಚಿ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
"ನಾನು ಸೋನಂ ಜಿ ಅವರಿಗೆ ವೈದ್ಯರ ಸಲಹೆಯಂತೆ ತಮ್ಮ ದಿನಚರಿಯನ್ನು ಪಾಲಿಸುವಂತೆ ಹಾಗೂ ಸಾಧ್ಯವಾದಷ್ಟು ಬೇಗ ತಮ್ಮ ಹಿಂದಿನ ತೂಕವನ್ನು ಮರಳಿ ಪಡೆಯುವಂತೆ ವಿನಂತಿಸುತ್ತೇನೆ. ಭಗವಂತನಲ್ಲಿ ಪ್ರಾರ್ಥಿಸುತ್ತೇನೆ, ಸೋನಂ ಜಿ ಸದಾ ಆರೋಗ್ಯವಾಗಿರಲಿ." ಎಂದು ಪ್ರಧಾನಿ ತಮ್ಮ ಟ್ವೀಟ್ ನಲ್ಲಿ ಹಾರೈಸಿದ್ದಾರೆ.