ಮಧ್ಯರಾತ್ರಿಯ ವೀಡಿಯೋಗೆ ಸ್ಪಂದನೆ: ಯುವಜನರಿಗೆ ʼThank you friend’sʼ ಎಂದ ಪ್ರಧಾನಿ ಮೋದಿ

Instagramನಲ್ಲಿ ಸಕ್ರಿಯರಾಗುವಂತೆ ಸಚಿವರಿಗೆ ಸಲಹೆ

Update: 2026-07-25 00:23 IST

ನರೇಂದ್ರ ಮೋದಿ | Photo Credit : PTI 

ಹೊಸದಿಲ್ಲಿ: ಮಧ್ಯರಾತ್ರಿ ಹಂಚಿಕೊಂಡಿದ್ದ ತಮ್ಮ ವೀಡಿಯೋ ಸಂದೇಶಕ್ಕೆ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯುವಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಜನರು ನೀಡಿದ ಪ್ರೀತಿ ಮತ್ತು ಸಕಾರಾತ್ಮಕ ಸಲಹೆಗಳು ತಮ್ಮೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿವೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ, "ಧನ್ಯವಾದಗಳು ಸ್ನೇಹಿತರೇ. ನಿನ್ನೆ ರಾತ್ರಿ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶ ಸಿಕ್ಕಿತು. ನಾನು ಹಂಚಿಕೊಂಡ ವೀಡಿಯೋಗೆ ನೀವು ನೀಡಿದ ಪ್ರತಿಕ್ರಿಯೆ ಹಾಗೂ ಸಕಾರಾತ್ಮಕ ಸಲಹೆಗಳಿಗೆ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ. ನಮ್ಮ ಸಂಬಂಧ ಇನ್ನಷ್ಟು ಬಲಗೊಳ್ಳಲಿ. ಧನ್ಯವಾದಗಳು, Thank you friend’s," ಎಂದು ಪ್ರಧಾನಿ ಹೇಳಿದ್ದಾರೆ.

ಗುರುವಾರ ರಾತ್ರಿ 11.52ಕ್ಕೆ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಸುಮಾರು ಮೂರು ನಿಮಿಷಗಳ ವೀಡಿಯೋ ಸಂದೇಶ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ಶುಕ್ರವಾರ ಧನ್ಯವಾದ ಸಂದೇಶ ಬಿಡುಗಡೆ ಮಾಡಿದ್ದಾರೆ. ಮಧ್ಯರಾತ್ರಿಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸ್ಪಂದನೆ ಪಡೆದಿದ್ದು, ಪೋಸ್ಟ್ ಮಾಡಿದ ಕೇವಲ ಎಂಟು ನಿಮಿಷಗಳಲ್ಲಿ 2.5 ಮಿಲಿಯನ್ಗಿಂತ ಹೆಚ್ಚು ವೀಕ್ಷಣೆಗಳನ್ನು ದಾಖಲಿಸಿದೆ. Instagramನಲ್ಲಿ 20 ನಿಮಿಷಗಳಲ್ಲೇ 1 ಮಿಲಿಯನ್ಗಿಂತ ಹೆಚ್ಚು ಲೈಕ್ಗಳನ್ನು ಪಡೆದಿದೆ. ಅಲ್ಲದೆ, ವೀಡಿಯೋ ಪ್ರಕಟಿಸಿದ ಬಳಿಕ ಒಂದೇ ರಾತ್ರಿಯಲ್ಲಿ ಪ್ರಧಾನಿ ಮೋದಿ ಅವರ Instagram ಖಾತೆಗೆ ಸುಮಾರು 1 ಮಿಲಿಯನ್ ಹೊಸ ಫಾಲೋವರ್ ಗಳು ಸೇರ್ಪಡೆಯಾಗಿದ್ದಾರೆ.

ಗುರುವಾರ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕರಡು ಕಾನೂನು ಹಾಗೂ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ ಕುರಿತು ಕೇಂದ್ರ ಸಚಿವ ಸಂಪುಟ ಚರ್ಚಿಸಲಿದೆ ಎಂದು ಪ್ರಧಾನಿ ಘೋಷಿಸಿದ್ದರು. ಮಳೆಗಾಲದ ಅಧಿವೇಶನದಲ್ಲೇ ಈ ಮಸೂದೆಯನ್ನು ಸಂಸತ್ತಿನಲ್ಲಿ ಸಾಧ್ಯವಾದಷ್ಟು ಬೇಗ ಅಂಗೀಕರಿಸಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದೂ ಅವರು ತಿಳಿಸಿದ್ದರು.

ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಅತ್ಯಂತ ಗಂಭೀರ ವಿಷಯ ಎಂದು ಹೇಳಿದ್ದ ಪ್ರಧಾನಿ, ಇಂತಹ ಘಟನೆಗಳು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಅಪಾರ ನೋವುಂಟು ಮಾಡಿವೆ ಎಂದು ಉಲ್ಲೇಖಿಸಿದ್ದರು.

"ಇದು ಸಣ್ಣ ವಿಷಯವಲ್ಲ. ಇದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಅಪಾರ ನೋವುಂಟು ಮಾಡಿದೆ," ಎಂದು ಪ್ರಧಾನಿ ಹೇಳಿದ್ದರು.

Full View

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಸರಕಾರದ ಮೊದಲ ಆದ್ಯತೆ ಯಾವುದೇ ವಿದ್ಯಾರ್ಥಿಯ ಶೈಕ್ಷಣಿಕ ವರ್ಷ ವ್ಯರ್ಥವಾಗದಂತೆ ನೋಡಿಕೊಳ್ಳುವುದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಸರಕಾರ ದೃಢನಿಶ್ಚಯ ಹೊಂದಿದೆ ಎಂದೂ ಅವರು ತಿಳಿಸಿದ್ದಾರೆ.

ಇದೇ ವೇಳೆ, ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ Instagramನಲ್ಲಿ ಹೆಚ್ಚು ಸಕ್ರಿಯರಾಗುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆಯಲ್ಲಿ ಸಚಿವರಲ್ಲಿ ಎಷ್ಟು ಮಂದಿ Instagram ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ದೇಶದ ಯುವಜನರಲ್ಲಿ ಹೆಚ್ಚಿನವರು Instagramನಲ್ಲಿ ಸಮಯ ಕಳೆಯುತ್ತಿರುವುದರಿಂದ, ಅವರೊಂದಿಗೆ ಸರಕಾರದ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಆ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಸಚಿವರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News