Photo Credit: ndtv

ಹೊಸದಿಲ್ಲಿ: ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಆರಂಭಿಸುವ ವಿಚಾರವಾಗಿ ನಡೆಯುತ್ತಿರುವ ವಿವಾದದ ನಡುವೆಯೇ, ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರು ಉದ್ಯಮಿ ಮುಖೇಶ್ ಅಂಬಾನಿ ಅವರನ್ನು ಗುರಿಯಾಗಿಸಿಕೊಂಡು ಶುಕ್ರವಾರ ಮತ್ತೆ ಟೀಕಿಸಿದ್ದಾರೆ.

‘ಆತ್ಮೀಯ ಪ್ರಧಾನಿ ಅಂಬಾನಿ, ನೀವು ಭಾರತದ ನಿಜವಾದ ಮುಖ್ಯಸ್ಥರು ಎಂಬುದನ್ನು ಅರಿಯದಿದ್ದಕ್ಕಾಗಿ ದಯವಿಟ್ಟು ನನ್ನ ವಿನಮ್ರ ಕ್ಷಮೆ ಸ್ವೀಕರಿಸಿ’ ಎಂದು ಮಸ್ಕ್ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವ್ಯಂಗ್ಯವಾಗಿ ಬರೆದಿದ್ದಾರೆ.

‘ಭಾರತದ ಜನರ ಮೇಲೆ ನಿಮ್ಮ ಏಕಸ್ವಾಮ್ಯದ ಶೋಷಣೆಯನ್ನು ಮುಂದುವರಿಸಲು ನೀವು ಬಯಸುತ್ತೀರಿ ಎಂಬುದು ಸಹಜ. ಆದರೂ, ಸ್ಟಾರ್‌ ಲಿಂಕ್ ಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಪರಿಗಣಿಸುತ್ತೀರಾ?’ ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದ ಅನೇಕ ಪ್ರದೇಶಗಳಿವೆ. ಇದರಿಂದ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ಮತ್ತು ಸಣ್ಣ ಉದ್ಯಮಗಳಿಗೆ ತಮ್ಮ ಸರಕುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅವಕಾಶ ತಪ್ಪಿಹೋಗುತ್ತಿದೆ. ಸ್ಟಾರ್‌ ಲಿಂಕ್ ಈ ಜನರ ಜೀವನವನ್ನು ಉತ್ತಮಗೊಳಿಸಬಲ್ಲದು ಎಂದು ಅವರು ಹೇಳಿದ್ದಾರೆ.

ಸ್ಪೇಸ್ಎಕ್ಸ್ ಒಡೆತನದ ಸ್ಟಾರ್‌ ಲಿಂಕ್, ಕೇಂದ್ರ ಸರ್ಕಾರದಿಂದ ಟೆಲಿಕಾಂ ಪರವಾನಗಿ ಪಡೆದಿರುವ ಮೂರು ಉಪಗ್ರಹ ಆಧಾರಿತ ಜಾಗತಿಕ ಮೊಬೈಲ್ ವೈಯಕ್ತಿಕ ಸಂವಹನ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ. ಭಾರ್ತಿ ಬೆಂಬಲಿತ ಯೂಟೆಲ್ಸ್ಯಾಟ್ ಒನ್ವೆಬ್ ಮತ್ತು ಜಿಯೋ ಪ್ಲಾಟ್ಫಾರ್ಮ್ಸ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಉಳಿದೆರಡು ಕಂಪೆನಿಗಳಾಗಿವೆ.

ಆದರೆ, ಸ್ಪೆಕ್ಟ್ರಮ್ ಹಂಚಿಕೆ ಮತ್ತು ಸೇವೆಗಳ ಆರಂಭಕ್ಕೂ ಮುನ್ನ ಕಂಪೆನಿಗಳು ಭದ್ರತಾ ಷರತ್ತುಗಳನ್ನು ಪಾಲಿಸುತ್ತಿರುವುದನ್ನು ಸಾಬೀತುಪಡಿಸಬೇಕಿದೆ. ಈ ಸಂಬಂಧ ಭದ್ರತಾ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

►ಪ್ರಭಾವಿ ಉದ್ಯಮಿಗಳಿಂದ ಅಡ್ಡಿ: ಮಸ್ಕ್ ಆರೋಪ

ಭಾರತದಲ್ಲಿ ಸ್ಟಾರ್‌ ಲಿಂಕ್ ಸೇವೆ ಆರಂಭಿಸಲು ಕೆಲವು ‘ಪ್ರಭಾವಿ ಉದ್ಯಮಿಗಳು’ ಅಡ್ಡಿಪಡಿಸುತ್ತಿದ್ದಾರೆ ಎಂದು ಮಸ್ಕ್ ಬುಧವಾರ ‘ಎಕ್ಸ್’ನಲ್ಲಿ ಆರೋಪಿಸಿದ್ದರು.

ಭಾರತ ಸರ್ಕಾರದ ಎಲ್ಲ ಕಾನೂನು ಮತ್ತು ಅಗತ್ಯತೆಗಳನ್ನು ಪಾಲಿಸಿದ್ದರೂ ಸ್ಟಾರ್‌ ಲಿಂಕ್ಗೆ ಇನ್ನೂ ಪರವಾನಗಿ ಏಕೆ ಸಿಕ್ಕಿಲ್ಲ ಎಂದು ಮಸ್ಕ್ ಗುರುವಾರ ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor