21 ಎಸೆತಗಳಲ್ಲಿ ಅರ್ಧಶತಕ: ವಿರಾಟ್ ಕೊಹ್ಲಿ ದಾಖಲೆ ಸರಿಗಿಟ್ಟಿದ ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್ | Photo Credit : PTI
ರಾಂಚಿ: ವೆಸ್ಟ್‌ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಎರಡನೇ ಟಿ-20 ಪಂದ್ಯದ ವೇಳೆ ಕೇವಲ 21 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿರುವ ಸಂಜು ಸ್ಯಾಮ್ಸನ್ ತನ್ನ ಕಳಪೆ ಫಾರ್ಮ್‌ನಿಂದ ಹೊರಬಂದಿದ್ದಾರೆ. ವಿಂಡೀಸ್ ವಿರುದ್ಧದ ಟಿ ಪಂದ್ಯದಲ್ಲಿ ಜಂಟಿ ವೇಗದ ಅರ್ಧಶತಕ ಗಳಿಸಿ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದರು.
ಸ್ಯಾಮ್ಸನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿ 2019ರಲ್ಲಿ ವಾಂಖಡೆ ಸ್ಟೇಡಿಯಂನಲ್ಲಿ ಕೊಹ್ಲಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು. ವಿಕೆಟ್‌ಕೀಪರ್-ಬ್ಯಾಟರ್ ಸ್ಯಾಮ್ಸನ್ ಅಬ್ಬರದ ನೆರವಿನಿಂದ ಭಾರತವು ವಿಂಡೀಸ್ ವಿರುದ್ದ ಟಿ-20ಯಲ್ಲಿ ಪವರ್‌ಪ್ಲೇನಲ್ಲಿ ಗರಿಷ್ಠ ಸ್ಕೋರ್(79/1) ಗಳಿಸಿದೆ. ಈ ಹಿಂದಿನ ದಾಖಲೆ(72 ರನ್)ಮುರಿದಿದೆ.
ಲಕ್ನೊದಲ್ಲಿ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 11 ರನ್ ಗಳಿಸಿದ್ದ ಸ್ಯಾಮ್ಸನ್ ಶುಕ್ರವಾರ ವಿಂಡೀಸ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು.
ಸ್ಯಾಮ್ಸನ್ 3ನೇ ಓವರ್‌ನಲ್ಲಿ ಆರು ರನ್ ಗಳಿಸಿದ್ದಾಗ ಹಾಗೂ 6ನೇ ಓವರ್‌ನಲ್ಲಿ 42 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಸತತ ಎರಡು ಬೌಂಡರಿ ಗಳಿಸಿ ತನ್ನ ಅರ್ಧಶತಕ ಪೂರೈಸಿದರು.