ನವಿ ಪಿಳ್ಳೈ ಅವರಿಗೆ ನೊಬೆಲ್ ಪ್ರಶಸ್ತಿ ಘೋಷಿಸಿದ್ದಕ್ಕೆ ಮುನಿಸಿಕೊಂಡ ಟ್ರಂಪ್!
ನವಿ ಪಿಳ್ಳೈ , ಡೊನಾಲ್ಡ್ ಟ್ರಂಪ್ | Photo Credit : PTI
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ನವಿ ಪಿಳ್ಳೈ ಅವರನ್ನು ವಿಮರ್ಶಿಸುವ ಪೋಸ್ಟ್ ಒಂದನ್ನು ಮರುಹಂಚಿಕೊಂಡಿದ್ದು, ದಕ್ಷಿಣ ಆಫ್ರಿಕಾದ ನ್ಯಾಯಶಾಸ್ತ್ರಜ್ಞೆಯಾಗಿರುವ ಅವರು ‘ಅಮೆರಿಕ ಮತ್ತು ಇಸ್ರೇಲ್ನ ದ್ವೇಷಿ’ ಎಂದು ಆರೋಪಿಸಿದ್ದಾರೆ.
ಈ ಪೋಸ್ಟ್ ನಲ್ಲಿ ನೊಬೆಲ್ ಸಮಿತಿಯು ಅವರಿಗೆ ಪ್ರಶಸ್ತಿ ನೀಡಿರುವುದನ್ನು ಟೀಕಿಸಲಾಗಿದ್ದು, ನವಿ ಪಿಳ್ಳೈ ಅವರು ಶಾಂತಿಯನ್ನು ಉತ್ತೇಜಿಸಲು ಎಂದಿಗೂ ಏನನ್ನೂ ಮಾಡಿಲ್ಲ ಎಂದು ಪ್ರತಿಪಾದಿಸಲಾಗಿದೆ.
‘ಶೋನ್ ಲಾ’ ಟ್ವಿಟರ್ ಖಾತೆ ಹಂಚಿಕೊಂಡಿದ್ದ ಪೋಸ್ಟ್ ಅನ್ನು ಟ್ರಂಪ್ ಮರುಹಂಚಿಕೊಂಡಿದ್ದಾರೆ. ಅದರಲ್ಲಿ ನೊಬೆಲ್ ಸಮಿತಿಯು ಪಿಳ್ಳೈ ಅವರನ್ನು ಆಯ್ಕೆ ಮಾಡುವ ಮೂಲಕ ‘ತನಗೆ ತಾನೇ ಸರಿಪಡಿಸಲಾಗದಷ್ಟು ಅವಮಾನ ಮಾಡಿಕೊಂಡಿದೆ’ ಎಂದು ಹೇಳಲಾಗಿದೆ. ಪಿಳ್ಳೈ ಅವರು ಅಮೆರಿಕ ಮತ್ತು ಇಸ್ರೇಲ್ ನ ನಿಸ್ಸಂಕೋಚ ದ್ವೇಷಿಯಾಗಿದ್ದು, ಭಯೋತ್ಪಾದಕರನ್ನು ಮತ್ತು ಹಮಾಸ್ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಗಾಝಾದಲ್ಲಿ ನಡೆದ ಜನಾಂಗೀಯ ಹತ್ಯೆಯ ಆರೋಪಗಳ ಕುರಿತು ಅವರು ನಡೆಸಿದ ತನಿಖೆಯನ್ನೂ ವಿಮರ್ಶಿಸಲಾಗಿದೆ.