Tamil Nadu | ಕ್ಷೇತ್ರ ಪುನರ್ ವಿಂಗಡಣೆಗೆ ಮಸೂದೆಗೆ DMK ಬೆಂಬಲದ ಹಿಂದೆ 'ರಾಜಕೀಯ ಡೀಲ್'; ಅಣ್ಣಾಮಲೈ ಆರೋಪ
'ಬೆಲೆ' ಪಡೆದುಕೊಂಡಿದೆ DMK; ED, CBI ತನಿಖೆಗಳ ವೇಗ ತಗ್ಗುತ್ತದೆಯೇ ಎಂದು ನೋಡಬೇಕು
Photo Credit: X/ @annamalai_k
ಚೆನ್ನೈ: ಬಿಜೆಪಿಯ ಸಿದ್ಧಾಂತವನ್ನು ಸದಾ ವಿರೋಧಿಸುತ್ತಾ ಬಂದಿರುವ DMK, ಕೇಂದ್ರ ಸರಕಾರದ ಪುನರ್ ವಿಂಗಡಣೆ ಮಸೂದೆಗೆ ಬೆಂಬಲ ನೀಡಲು ಮುಂದಾಗಿರುವುದರ ಹಿಂದೆ ರಾಜಕೀಯ ಒಪ್ಪಂದವಿದೆ. ಮಸೂದೆಗೆ ಬೆಂಬಲ ನೀಡುವ ಬದಲಾಗಿ DMK ನಿರ್ದಿಷ್ಟ 'ಬೆಲೆ'ಯನ್ನು ಪಡೆದುಕೊಂಡಿದೆ ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಆರೋಪಿಸಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, DMKಯ 22 ಲೋಕಸಭಾ ಹಾಗೂ 8 ರಾಜ್ಯಸಭಾ ಸದಸ್ಯರ ಬೆಂಬಲಕ್ಕೆ ಪ್ರತಿಯಾಗಿ ಕೇಂದ್ರ ಸರಕಾರದಿಂದ ಪಕ್ಷವು ರಾಜಕೀಯ ಅನುಕೂಲ ಪಡೆದುಕೊಂಡಿದೆ ಎಂದು ಹೇಳಿದರು.
"DMK ಯಾವುದೇ ಷರತ್ತುಗಳಿಲ್ಲದೆ ಮಸೂದೆಯನ್ನು ಬೆಂಬಲಿಸುತ್ತಿದೆ ಎಂದು ಯಾರಾದರೂ ಹೇಳಿದರೆ ನನಗೆ ನಗು ಬರುತ್ತದೆ. DMK ಶೇ. 100ರಷ್ಟು ಷರತ್ತುಬದ್ಧವಾಗಿಯೇ ಮಸೂದೆಯನ್ನು ಬೆಂಬಲಿಸುತ್ತಿದೆ" ಎಂದು ಅವರು ವ್ಯಂಗ್ಯವಾಡಿದರು.
DMK ನಾಯಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳ (CBI) ತಮ್ಮ ವೇಗವನ್ನು ಈಗ ತಗ್ಗಿಸುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಅಣ್ಣಾಮಲೈ ಹೇಳಿದರು. ಸೆಂಥಿಲ್ ಬಾಲಾಜಿ ವಿರುದ್ಧ ಸಿಬಿಐ ದಾಖಲಿಸಿರುವ ಟ್ರಾನ್ಸ್ ಫಾರ್ಮರ್ ಹಗರಣದ ಪ್ರಕರಣ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ TASMAC ಹಗರಣವನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
►2029ರ ವೇಳೆಗೆ ರಾಜಕೀಯ ಬದಲಾವಣೆ?
DMK ಕೇಂದ್ರ ಸಚಿವ ಸಂಪುಟ ಸೇರುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, ಅಲ್ಪಸಂಖ್ಯಾತರ ಮತಗಳಿಗಾಗಿ DMK ಮತ್ತು TVK ನಡುವೆ ತೀವ್ರ ಪೈಪೋಟಿ ಇರುವುದರಿಂದ ಸದ್ಯಕ್ಕೆ ಸಚಿವ ಸಂಪುಟ ಸೇರುವ ಸಾಧ್ಯತೆ ಕಡಿಮೆ ಎಂದರು. ಆದರೆ, 2029ರ ವೇಳೆಗೆ ದೊಡ್ಡ ರಾಜಕೀಯ ಬದಲಾವಣೆಗಳು ಸಂಭವಿಸಬಹುದು ಎಂದು ಭವಿಷ್ಯ ನುಡಿದರು.
ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದ 132ನೇ ಸಾಂವಿಧಾನಿಕ ತಿದ್ದುಪಡಿಯನ್ನು ಸ್ವಾಗತಿಸಿದ ಅಣ್ಣಾಮಲೈ, ಈ ಕ್ರಮ ದೇಶಕ್ಕೂ ಮತ್ತು ತಮಿಳುನಾಡಿಗೂ ಅನುಕೂಲಕರವಾಗಿದೆ ಎಂದರು. ತಮಿಳುನಾಡಿನ ಲೋಕಸಭಾ ಸ್ಥಾನಗಳ ಸಂಖ್ಯೆ 39ರಿಂದ 59ಕ್ಕೆ ಏರಿಕೆಯಾಗಲಿದೆ. ಸಂಸತ್ತಿನಲ್ಲಿ ರಾಜ್ಯದ ಪ್ರಾತಿನಿಧ್ಯದ ಪಾಲು ಶೇ. 7.18ರಿಂದ ಶೇ. 7.21ಕ್ಕೆ ಹೆಚ್ಚಾಗಲಿದೆ ಎಂದು ವಿವರಿಸಿದರು.
2027ರ ಜನಗಣತಿಯ ಆಧಾರದ ಮೇಲೆ ಮಾತ್ರ ಕ್ಷೇತ್ರ ಪುನರ್ ವಿಂಗಡಣೆ ನಡೆದಿದ್ದರೆ ತಮಿಳುನಾಡು ತನ್ನ ಸಂಸದೀಯ ಸ್ಥಾನಗಳನ್ನು ಕಳೆದುಕೊಳ್ಳುವ ಅಪಾಯವಿತ್ತು. ಆದರೆ, ಮುಂದಿನ 25 ವರ್ಷಗಳ ಕಾಲ ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಪ್ರಸ್ತಾವನೆಯಿಂದ ರಾಜ್ಯಕ್ಕೆ ರಕ್ಷಣೆ ದೊರೆತಿದೆ ಎಂದು ಹೇಳಿದರು.
ಮುಂದಿನ ವರ್ಷದ ಸಂಸತ್ತಿನ ಅಧಿವೇಶನವೊಂದರಲ್ಲಿ ಕೇಂದ್ರ ಸರಕಾರವು 'ಒಂದು ರಾಷ್ಟ್ರ, ಒಂದು ಚುನಾವಣೆ' ಪ್ರಸ್ತಾವನೆಯನ್ನು ಮುಂದಿಡಲಿದೆ ಎಂದು ಅಣ್ಣಾಮಲೈ ಭವಿಷ್ಯ ನುಡಿದರು. ಈ ಪ್ರಸ್ತಾವನೆಯನ್ನು DMK ಶೇ. 100ರಷ್ಟು ಬೆಂಬಲಿಸಲಿದೆ ಎಂದೂ ಹೇಳಿದರು.
►ಕಾಂಗ್ರೆಸ್ಗೆ ಏನೂ ತಿಳಿದಿಲ್ಲ!
ಕಾಂಗ್ರೆಸ್ ಪಕ್ಷದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಅಣ್ಣಾಮಲೈ, ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಆ ಪಕ್ಷಕ್ಕೆ "ಏನೂ ತಿಳಿದಿಲ್ಲ" ಮತ್ತು ಅದು "ಸಂಪೂರ್ಣ ರಾಜಕೀಯ ಅಪಕ್ವತೆ" ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.
ದಿಲ್ಲಿಯಲ್ಲಿ DMK ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪ್ರಸ್ತುತಿಯೊಂದನ್ನು ನೀಡುತ್ತಿದ್ದರು ಎಂದು ಅವರು ಉಲ್ಲೇಖಿಸಿದರು.