ವೋಟ್ ಚೋರಿ ಬಳಿಕ ಬಿಜೆಪಿಯಿಂದ ಈಗ ಸೀಟ್ ಚೋರಿ: ಎಡಪಕ್ಷಗಳ ಆರೋಪ
ಹೊಸದಿಲ್ಲಿ, ನ.29: ರಾಜಕೀಯ ಲಾಭಕ್ಕಾಗಿ ಚುನಾವಣಾ ಕ್ಷೇತ್ರಗಳ ಪುನರ್ವಿಂಗಡಣೆ ನಡೆಸಲು ಮತ್ತು ಪ್ರಾದೇಶಿಕ ಹಾಗೂ ಜಾತಿ ವಿಭಜನೆಗಳನ್ನು ಹೆಚ್ಚಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದೆ ಎಂದು ಐದು ಎಡಪಕ್ಷಗಳು ರವಿವಾರ ಆರೋಪಿಸಿವೆ. ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಮರುಮಂಡಿಸುವ ಉದ್ದೇಶದಿಂದ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಸರಕಾರದ ನಿರ್ಧಾರವನ್ನು ಅವು ತೀವ್ರವಾಗಿ ಖಂಡಿಸಿವೆ.
ಸಿಪಿಎಂ, ಸಿಪಿಐ, ಸಿಪಿಐ(ಎಂಎಲ್)-ಲಿಬರೇಶನ್, ಆರ್ಎಸ್ಪಿ ಮತ್ತು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ, ಸಂಸತ್ ಅಧಿವೇಶನವನ್ನು 104 ದಿನಗಳ ಕಾಲ ಮುಂದೂಡಿದ ಬಳಿಕ ಮತ್ತೆ ಕರೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ‘ಆಪರೇಷನ್ ಕಮಲ’ದ ಮೂಲಕ ವಿರೋಧ ಪಕ್ಷಗಳನ್ನು ಒಡೆದು ದುರ್ಬಲಗೊಳಿಸಿ, ಸಂಸತ್ತಿನಲ್ಲಿ ಕೃತಕವಾಗಿ ಸಂಖ್ಯಾಬಲ ಹೆಚ್ಚಿಸಿಕೊಂಡಿರುವ ಬಿಜೆಪಿ, ಮಹಿಳಾ ಮೀಸಲಾತಿಯೊಂದಿಗೆ ತಳುಕು ಹಾಕಿ ಈ ಮಸೂದೆಯನ್ನು ಮಂಡಿಸಲು ಪ್ರಯತ್ನಿಸುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ.
ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವಂತೆ ಎಡಪಕ್ಷಗಳು ನಿರಂತರವಾಗಿ ಹೋರಾಡಿವೆ. 2023ರಲ್ಲಿ ಸರ್ವಪಕ್ಷಗಳ ಬೆಂಬಲದೊಂದಿಗೆ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಕಾಯ್ದೆಯನ್ನು ತಕ್ಷಣ ಜಾರಿಗೊಳಿಸುವ ಬದಲು ಸರಕಾರ ಉದ್ದೇಶಪೂರ್ವಕವಾಗಿ ವಿಳಂಬಿಸುತ್ತಿದೆ ಎಂದು ಅವು ದೂರಿವೆ. ಕ್ಷೇತ್ರ ಪುನರ್ವಿಂಗಡಣೆಯಿಂದ ಮಹಿಳಾ ಮೀಸಲಾತಿಯನ್ನು ಪ್ರತ್ಯೇಕಿಸಿ, ಕಾಯ್ದೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿವೆ.
ರಾಜಕೀಯ ಪಕ್ಷಗಳು ಅಥವಾ ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಮತ ಕಳ್ಳತನದ ಬಳಿಕ ಬಿಜೆಪಿ ಈಗ ಸೀಟು ಕಳ್ಳತನವನ್ನೂ ನಡೆಸುತ್ತಿದೆ ಎಂದು ಜಂಟಿ ಹೇಳಿಕೆಯಲ್ಲಿ ಟೀಕಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪುನರ್ವಿಂಗಡಣೆ ಆಯೋಗದಲ್ಲಿ ಸೇರಿಸಬಾರದು. ಬದಲಿಗೆ ವಿರೋಧ ಪಕ್ಷಗಳ ಪ್ರತಿನಿಧಿಗಳು ಮತ್ತು ನಿಷ್ಪಕ್ಷಪಾತ ನ್ಯಾಯಾಧೀಶರಿಗೆ ಅವಕಾಶ ಕಲ್ಪಿಸಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ. ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುವ ಈ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸದೆ, ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಮುಕ್ತ ಚರ್ಚೆ ನಡೆಸಬೇಕು. ಜನರ ಹಿತಾಸಕ್ತಿ ಕಾಪಾಡಲು ಎಲ್ಲ ಪಕ್ಷಗಳು ಒಗ್ಗೂಡಿ ಬಿಜೆಪಿ ಸರಕಾರದ ನಡೆಗಳನ್ನು ವಿರೋಧಿಸಬೇಕು ಎಂದು ಮನವಿ ಮಾಡಿವೆ.