Photo Credit: X /@_RapidReports

ಚಂಡೀಗಢ, ಆ. 26: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಲಡಾಖ್ ನ ನ್ಯೋಮಾದಲ್ಲಿರುವ ಜಗತ್ತಿನ ಅತಿ ಎತ್ತರದ ಧುಮುಕುವ ವಲಯಗಳಲ್ಲಿ ಒಂದರಲ್ಲಿ 22,000 ಅಡಿ ಎತ್ತರದಲ್ಲಿ ತನ್ನ ಸೇನಾ ಸಮರ ಪ್ಯಾರಾಚೂಟ್ ವ್ಯವಸ್ಥೆ (MCPS)ಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ಭಾರತೀಯ ವಾಯುಪಡೆ (IAF) ಇತ್ತೀಚೆಗೆ ನ್ಯೋಮಾದಲ್ಲಿ ವಾಯುನೆಲೆ ಆರಂಭಿಸಿದೆ. ಇದು ಸಮರ ವಿಮಾನಗಳ ಕಾರ್ಯಾಚರಣೆಗಳಿಗಾಗಿ ಇರುವ ಜಗತ್ತಿನ ಅತಿ ಎತ್ತರದ ವಾಯುನೆಲೆಗಳಲ್ಲಿ ಒಂದಾಗಿದೆ. ನ್ಯೋಮಾವನ್ನು ಈ ಹಿಂದೆ ಪಡೆ, ವಾಹನಗಳು ಹಾಗೂ ಸಲಕರಣೆಗಳನ್ನು ಪ್ಯಾರಾಚೂಟ್ ಮೂಲಕ ಇಳಿಸುವುದು ಸೇರಿದಂತೆ ಹಲವು ಸೇನಾ ಕವಾಯತುಗಳಿಗೆ ಬಳಸಲಾಗಿದೆ.

ಪ್ಯಾರಾಚೂಟ್ ಅನ್ನು 20 ಸಾವಿರ ಅಡಿ ಎತ್ತರದಲ್ಲಿ ನಿಯೋಜಿಸಲಾಯಿತು. ಜಿಗಿತಗಾರರು 13,700 ಅಡಿ ಎತ್ತರದಲ್ಲಿ ಸುರಕ್ಷಿತವಾಗಿ ಇಳಿದರು. ಈ ಪರೀಕ್ಷೆಯನ್ನು ಮೈನಸ್ 15 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ನಡೆಸಲಾಯಿತು.

MCPS ಅನ್ನು DRDOನ ಆಗ್ರಾದಲ್ಲಿರುವ ಏರಿಯಲ್ ಡೆಲಿವರಿ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ADRDE) ಮತ್ತು ಬೆಂಗಳೂರಿನ ಡಿಫೆನ್ಸ್ ಬಯೋ ಎಂಜಿನಿಯರಿಂಗ್ ಆ್ಯಂಡ್ ಎಲಕ್ಟ್ರೋಮೆಡಿಕಲ್ ಲ್ಯಾಬೋರೇಟರಿ ಅಭಿವೃದ್ಧಿಗೊಳಿಸಿದೆ.

DRDO ‘ಎಕ್ಸ್’ನ ತನ್ನ ಪೋಸ್ಟ್ನಲ್ಲಿ ಹೀಗೆ ಬರೆದುಕೊಂಡಿದೆ. ‘‘ADRDE, DRDO ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಸೇನಾ ಸಮರ ಪ್ಯಾರಾಚೂಟ್ ವ್ಯವಸ್ಥೆಯನ್ನು ಜಗತ್ತಿನ ಅತಿ ಎತ್ತರದ ಧುಮುಕುವ ವಲಯ (ನ್ಯೋಮಾ, ಮುಧ್ ಧುಮುಕುವ ವಲಯ)ಗಳಲ್ಲಿ ಒಂದರಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ADRDE ಪರೀಕ್ಷಾ ಜಿಗಿತ ವಿಂಗ್ನ ಕಮಾಂಡರ್, ಮುಖ್ಯ ಪರೀಕ್ಷಾ ಜಿಗಿತಗಾರ ರಾಹುಲ್ ಝಾ, ಎಂ.ಡಬ್ಲ್ಯು.ಒ. ವಿವೇಕ್ ತಿವಾರಿ ಅವರು ಮೈನಸ್ 15 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದ, ಸರಾಸರಿ ಸಮುದ್ರ ಮಟ್ಟ (AMSL) 22,000 ಅಡಿ ಎತ್ತರದಿಂದ ಜಿಗಿದರು. ಪ್ಯಾರಾಚೂಟ್ ಅನ್ನು 20,000 ಅಡಿ ಎತ್ತರದಲ್ಲಿ ತೆರೆಯಲಾಯಿತು. 13,700 ಅಡಿ ಎತ್ತರದಲ್ಲಿ ಸುರಕ್ಷಿತವಾಗಿ ಇಳಿಯಲಾಯಿತು. ಈ ಯಶಸ್ವಿ ಪ್ರಯೋಗವು ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಎಂಸಿಪಿಎಸ್ನ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಯುದ್ಧತಂತ್ರದ ಬಳಕೆಯನ್ನು ಪ್ರದರ್ಶಿಸಿತು. ಅಲ್ಲದೆ, ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯ ಬದ್ಧತೆಯನ್ನು ಬಲಪಡಿಸಿತು.’’

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor