ಸಾಂದರ್ಭಿಕ ಚಿತ್ರ

ಮುಂಬೈ, ಆ. 26: ಮಹಾರಾಷ್ಟ್ರ ಲೋಕಸೇವಾ ಆಯೋಗ (MPSC)ವು ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ‘ಗ್ರೂಪ್-ಬಿ’ ಔಷಧ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಬುಧವಾರ ರದ್ದುಗೊಳಿಸಿದೆ. ಮಾರ್ಚ್ 22ರಂದು ನಡೆದ ಸ್ಕ್ರೀನಿಂಗ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಮುಂಬೈ ಪೊಲೀಸರ ತನಿಖೆಯಲ್ಲಿ ದೃಢಪಟ್ಟ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ.

ತಮಗೆ ಪರೀಕ್ಷೆ ಪ್ರಾರಂಭವಾಗುವ ಮುನ್ನವೇ ಪ್ರಶ್ನೆಪತ್ರಿಕೆ ಸಿಕ್ಕಿತ್ತು ಎಂಬುದಾಗಿ ಕೆಲ ಅಭ್ಯರ್ಥಿಗಳು ಜುಲೈನಲ್ಲಿ MPSCಗೆ ತಿಳಿಸಿದ್ದರು. ಅದೂ ಅಲ್ಲದೆ, ತಮಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನೆಪತ್ರಿಕೆ ಸಿಕ್ಕಿತ್ತು ಎಂಬುದಾಗಿ ಇನ್ನೂ ಹಲವರು ಆಯೋಗಕ್ಕೆ ಮಾಹಿತಿ ನೀಡಿದ್ದರು.

ಈ ಬಗ್ಗೆ MPSC ಜುಲೈ 27ರಂದು ಮುಂಬೈ ಪೊಲೀಸ್ ಕಮಿಷನರ್ ಗೆ ದೂರು ನೀಡಿತ್ತು. ಮೇಲ್ನೋಟಕ್ಕೆ ಒಬ್ಬ ಅಭ್ಯರ್ಥಿಯು ಪ್ರಶ್ನೆಪತ್ರಿಕೆಯನ್ನು ಪಡೆದು ಅದರಿಂದ ಪ್ರಯೋಜನ ಪಡೆದಿರುವುದು ಕಂಡುಬಂದಿದೆ ಎಂದು ಮುಂಬೈ ಪೊಲೀಸ್ ಕ್ರೈಮ್ ಬ್ರಾಂಚ್ ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿತ್ತು. ಆದರೆ, ಒಂದಕ್ಕಿಂತ ಹೆಚ್ಚು ಮಂದಿ ಇದರಿಂದ ಲಾಭ ಪಡೆದಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿತ್ತು.

ಈ ಹುದ್ದೆಗೆ ಸಂಬಂಧಿಸಿದಂತೆ MPSC 2025ರ ಜುಲೈ 29ರಂದು ಆರಂಭಿಕ ಅಧಿಸೂಚನೆ ಹೊರಡಿಸಿತ್ತು. ಮಾರ್ಚ್ 22ರಂದು ರಾಜ್ಯದ ಆರು ವಿಭಾಗೀಯ ಕೇಂದ್ರಗಳಲ್ಲಿ ಆಫ್ಲೈನ್ ಪರೀಕ್ಷೆ ನಡೆದಿತ್ತು. ಜೂನ್ 12ರಂದು ಫಲಿತಾಂಶ ಪ್ರಕಟವಾಗಿದ್ದು, 506 ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. ಜುಲೈ 1ರಿಂದ ಜುಲೈ 22ರ ನಡುವೆ ನಡೆದ ಸಂದರ್ಶನದಲ್ಲಿ 488 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ನಂತರ 488 ಅಭ್ಯರ್ಥಿಗಳ ತಾತ್ಕಾಲಿಕ ಸಾಮಾನ್ಯ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು ಹಾಗೂ 485 ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಲಾಗಿತ್ತು.

ಮರುಪರೀಕ್ಷೆ ನಡೆಸುವುದಾಗಿ MPSC ತಿಳಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಹಾಗೂ ಯಾವುದೇ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಆಯೋಗ ತಿಳಿಸಿದೆ.

ಮರುಪರೀಕ್ಷೆಯ ಕುರಿತು ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದು.

ಕೇವಲ ಒಬ್ಬ ವಿದ್ಯಾರ್ಥಿಗೆ ಮಾತ್ರ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಸಿಕ್ಕಿದೆ ಎಂಬ ಕ್ರೈಮ್ ಬ್ರಾಂಚ್ ವರದಿಯನ್ನು ತಿರಸ್ಕರಿಸಿದ NCP(SP) ಶಾಸಕ ರೋಹಿತ್ ಪವಾರ್, ರಾಜ್ಯಾದ್ಯಂತ ಈ ಪ್ರಶ್ನೆಪತ್ರಿಕೆಯನ್ನು 40 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.

ಈ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುವ ಬದಲು, ಆಯೋಗವು ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಮತ್ತು ನಾವು ಹೆಸರುಗಳನ್ನು ನೀಡಿರುವ ಏಜೆಂಟ್ ಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor