ಸಾಂದರ್ಭಿಕ ಚಿತ್ರ

ಭೋಪಾಲ್, ಆ. 26: ಮಧ್ಯಪ್ರದೇಶದ 20 ವರ್ಷ ವಯಸ್ಸಿನ NEET ಆಕಾಂಕ್ಷಿ ಯುವತಿಯೊಬ್ಬರು, ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖುಷ್ಬೂ ಪಟೇಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು, ಆಕೆ ಎರಡನೇ ಬಾರಿಗೆ NEET ಪರೀಕ್ಷೆ ಬರೆಯಲು ಕೋಟಾದ ಕೋಚಿಂಗ್ ಸೆಂಟರ್ ಒಂದರಲ್ಲಿ ತರಬೇತಿ ಪಡೆಯುತ್ತಿದ್ದರು. ಲ್ಯಾಂಡ್ಮಾರ್ಕ್ ಸಿಟಿಯಲ್ಲಿರುವ ತನ್ನ ಅಪಾರ್ಟ್ಮೆಂಟ್ ನಲ್ಲಿ ಅವರು ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಹಾಗೂ ಆಕೆಯ ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನೂ ದೃಢಪಟ್ಟಿಲ್ಲ.

ಹಿಂದಿನ NEET-ಯುಜಿ ಪರೀಕ್ಷೆಯಲ್ಲಿ 450 ಅಂಕಗಳನ್ನು ಪಡೆದಿದ್ದಕ್ಕಾಗಿ ಖುಷ್ಬೂ ಪಟೇಲ್ ತೀವ್ರ ನೊಂದಿದ್ದರು ಎನ್ನಲಾಗಿದೆ.

ಜೆಇಇ ಪ್ರವೇಶ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದ ಆಕೆಯ ಸೋದರಿ ಖುಷಿ ಪಟೇಲ್ ಕೂಡಾ ತರಗತಿಗಳು ಮುಗಿದ ಬಳಿಕ ಫ್ಲ್ಯಾಟ್ ಗೆ ಮರಳಿದಾಗ, ಒಳಗಿನಿಂದ ಬಾಗಿಲು ಲಾಕ್ ಮಾಡಲಾಗಿತ್ತು. ಹಲವು ಬಾರಿ ಕದತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ, ಸ್ನೇಹಿತರು, ಭದ್ರತಾ ಸಿಬ್ಬಂದಿ ಹಾಗೂ ನೆರೆಹೊರೆಯವರ ಸಹಾಯದಿಂದ ಬಾಗಿಲು ತೆಗೆದು ನೋಡಿದಾಗ, ಖುಷ್ಬೂ ಪಟೇಲ್ ನೇಣುಬಿಗಿದು ಮೃತಪಟ್ಟಿರುವುದು ಕಂಡುಬಂತು.

ಪ್ರಕರಣಕ್ಕೆ ಸಂಬಂಧಿಸಿ ಖುಷ್ಬೂ ಅವರ ತಾತ ದೇಶ್ ರಾಜ್ ಪಟೇಲ್ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor