ಲೈಂಗಿಕ ಕಿರುಕುಳ ಪ್ರಕರಣ| ಬ್ರಿಜ್ ಭೂಷಣ್ ಸಿಂಗ್ ಮೇಲಿನ ಆರೋಪಗಳು 'ಸುಳ್ಳು, ಕಲ್ಪಿತ ಮತ್ತು ರಾಜಕೀಯ ಪ್ರೇರಿತ': ದಿಲ್ಲಿ ನ್ಯಾಯಾಲಯ

Update: 2026-08-10 08:42 IST

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌       Photo Credit: PTI


ಹೊಸದಿಲ್ಲಿ : ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಕ್ಷ್ಯಗಳ ಕೊರತೆಯಿಂದಾಗಿ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದಿಲ್ಲಿ ನ್ಯಾಯಾಲಯ ದೋಷಮುಕ್ತಗೊಳಿಸುವ ಆದೇಶದಲ್ಲಿ , ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳು, ಕಲ್ಪಿತ ಮತ್ತು ರಾಜಕೀಯ ಪ್ರೇರಿತ ಎಂದು ಹೇಳಿರುವುದಾಗಿ Hindusthan Times ವರದಿ ಮಾಡಿದೆ.

ಕಳೆದ ವಾರ, ದಿಲ್ಲಿ ನ್ಯಾಯಾಲಯವು ಸಾಕ್ಷ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಮತ್ತು WFI ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ದೋಷಮುಕ್ತಗೊಳಿಸಿತ್ತು.

ಪ್ರಕರಣದ ವಿಚಾರಣೆ ಆರಂಭವಾಗಿ ಎರಡು ವರ್ಷಗಳ ಬಳಿಕ, ಸಾಕ್ಷ್ಯಗಳ ಕೊರತೆಯಿಂದಾಗಿ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದಿಲ್ಲಿ ನ್ಯಾಯಾಲಯವು ದೋಷಮುಕ್ತಗೊಳಿಸಿದೆ.

ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಶ್ವಿನಿ ಪನ್ವಾರ್ ಅವರು ತಮ್ಮ ವಿಸ್ತೃತ ತೀರ್ಪಿನಲ್ಲಿ, "ಸಂತ್ರಸ್ತರು ನೀಡಿರುವ ಹೇಳಿಕೆಗಳು ಪ್ರಾಸಿಕ್ಯೂಷನ್ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತವೆ. ಇಡೀ ಆರೋಪಗಳು ಸುಳ್ಳು ಮತ್ತು ಕಲ್ಪಿತವಾಗಿವೆ ಹಾಗೂ ರಾಜಕೀಯ ಪ್ರೇರಿತವಾದ ಆಳವಾದ ಪಿತೂರಿಯ ಭಾಗವಾಗಿ ಆರೋಪಿಗಳ ವಿರುದ್ಧ ಈ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ" ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಹಿಂದೆ ಮಹಾದೇವ ಅಕಾಡೆಮಿಯ ತರಬೇತುದಾರರು ಮತ್ತು ಇಬ್ಬರು ಪ್ರಾಸಿಕ್ಯೂಷನ್ ಸಾಕ್ಷಿದಾರರ ಪಿತೂರಿ ಇತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಾಕ್ಷಿಗಳ ಸರಣಿ ಹೇಳಿಕೆಗಳಲ್ಲಿನ ಗಂಭೀರ ವಿರೋಧಾಭಾಸಗಳು, ಘಟನೆಯ ದಿನಾಂಕಗಳು ಮತ್ತು ಸಂದರ್ಭಗಳಿಗೆ ಹೊಂದಿಕೆಯಾಗದ ಸಾಕ್ಷ್ಯಾಧಾರಗಳು ಹಾಗೂ ಹಲವರ ಸಮ್ಮುಖದಲ್ಲಿ ಘಟನೆಗಳು ನಡೆದಿದ್ದರೂ ಯಾವುದೇ ಸಮಕಾಲೀನ ದೂರುಗಳು ದಾಖಲಾಗದಿರುವುದನ್ನು ನ್ಯಾಯಾಲಯವು ತೀರ್ಪಿನಲ್ಲಿ ಎತ್ತಿ ತೋರಿಸಿದೆ.

ಮೊದಲ ಪ್ರಕರಣ

ಮಂಗೋಲಿಯಾದಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ವೇಳೆ ನಡೆದಿದೆ ಎನ್ನಲಾದ ಘಟನೆಯ ಕುರಿತು ಪ್ರಸ್ತಾಪಿಸಿದ ನ್ಯಾಯಾಲಯ, ಘಟನೆಯ ಸಮಯ ಮತ್ತು ಸ್ಥಳದ ಕುರಿತು ದೂರುದಾರರ ಹೇಳಿಕೆಗಳಲ್ಲಿ ಗಂಭೀರ ವಿರೋಧಾಭಾಸಗಳಿವೆ ಎಂದು ತಿಳಿಸಿದೆ.

"ಒಂದು ಹೇಳಿಕೆಯಲ್ಲಿ 2015ರಲ್ಲಿ ಟರ್ಕಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ, ಆದರೆ ಮತ್ತೊಂದು ಹೇಳಿಕೆಯಲ್ಲಿ 2016ರಲ್ಲಿ ಮಂಗೋಲಿಯಾದಲ್ಲಿ ನಡೆದಿದೆ ಎಂದು ಹೇಳಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.

"ಈ ವ್ಯತ್ಯಾಸವು ಕೇವಲ ಸಾಂದರ್ಭಿಕ ವಿವರಗಳಲ್ಲಿನ ಸಣ್ಣ ವ್ಯತ್ಯಾಸವಲ್ಲ. ಇದು ಘಟನೆಯ ಮೂಲಭೂತ ಅಂಶಗಳಾದ, ಅಂದರೆ ಯಾವ ದೇಶ ಮತ್ತು ಯಾವ ವರ್ಷದಲ್ಲಿ ಘಟನೆ ನಡೆದಿದೆ ಎಂಬುದಕ್ಕೆ ಸಂಬಂಧಿಸಿದ್ದಾಗಿದೆ" ಎಂದು ತೀರ್ಪು ತಿಳಿಸಿದೆ.

2008ರ ದಿಲ್ಲಿ ಸ್ಟೇಡಿಯಂ ಪ್ರಕರಣ

2018ರಲ್ಲಿ ದಿಲ್ಲ ಕ್ರೀಡಾಂಗಣದ ಒಳಗೆ ನಡೆದಿದೆ ಎನ್ನಲಾದ ಮತ್ತೊಂದು ಘಟನೆಯ ಕುರಿತು ತನ್ನ ತೀರ್ಪಿನಲ್ಲಿ , “ಕುಟುಂಬ ಸದಸ್ಯರು, ತರಬೇತುದಾರರು ಮತ್ತು ಕ್ರೀಡಾಪಟುಗಳು ಸೇರಿದಂತೆ ಹಲವರ ಸಮ್ಮುಖದಲ್ಲಿ ಈ ಘಟನೆ ನಡೆದಿದ್ದರೂ, ಯಾವುದೇ ಸ್ವತಂತ್ರ ಪ್ರತ್ಯಕ್ಷದರ್ಶಿಗಳು ಆರೋಪಿಗಳ ವಿರುದ್ಧ ಸಾಕ್ಷ್ಯ ನುಡಿಯಲು ಮುಂದೆ ಬಂದಿಲ್ಲ ಎಂಬುವುದನ್ನು ನ್ಯಾಯಾಲಯ ಗಮನಿಸಿದೆ” ಎಂದು ತಿಳಿಸಿದೆ .

"ಅವರು ಸಂಕಷ್ಟ ಅನುಭವಿಸುವುದನ್ನು ನೋಡುತ್ತಾ ಸುಮ್ಮನಿರುವುದು ಅಲ್ಲಿರುವವರ ಸ್ವಾಭಾವಿಕ ನಡವಳಿಕೆಯಲ್ಲ. ಅವರು ಆ ಪರಿಸ್ಥಿತಿಯಿಂದ ಆಕೆಯನ್ನು ಹೊರತರಬೇಕಿತ್ತು ಅಥವಾ ಆರೋಪಿಯನ್ನು ಪ್ರಶ್ನಿಸಬೇಕಿತ್ತು" ಎಂದು ನ್ಯಾಯಾಲಯ ಹೇಳಿದೆ.

“ಆರೋಪಿಯು ದೂರುದಾರರ ಭುಜದ ಮೇಲೆ ಕೈಯಿಟ್ಟು ನಿಂತಿರುವುದನ್ನು ಕಂಡಿರುವುದಾಗಿ ಒಬ್ಬ ಸಾಕ್ಷಿ ಹೇಳಿದ್ದಾರೆ ಹೊರತು, ಯಾವುದೇ ಬಲವಂತದ ಅಪ್ಪಿಕೊಳ್ಳುವಿಕೆ ಅಥವಾ ಆರೋಪಿಯನ್ನು ತಳ್ಳಲು ದೂರುದಾರರು ಪ್ರಯತ್ನಿಸಿದ ಯಾವುದೇ ಉಲ್ಲೇಖವಿಲ್ಲ" ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ವಿಚಾರಣೆಯ ವೇಳೆ ಮೊಕದ್ದಮೆಯಿಂದ ಹಿಂದೆ ಸರಿದ ಇಬ್ಬರು ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯವು ಉಲ್ಲೇಖಿಸಿದ್ದು, ಮಹಾದೇವ ಅಕಾಡೆಮಿಗೆ ಸಂಬಂಧಿಸಿದ ತರಬೇತುದಾರರ ಒತ್ತಡ ಮತ್ತು ಬೆದರಿಕೆಯ ಮೇರೆಗೆ ತಾವು ಹೇಳಿಕೆ ನೀಡಿದ್ದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ತೀರ್ಪು ಹೇಳಿದೆ.

ಪ್ರತಿಭಟನೆಗೆ ಕೂರುವ ಮುನ್ನ ದೂರುದಾರರಲ್ಲಿ ಯಾರೊಬ್ಬರೂ ಲೈಂಗಿಕ ಕಿರುಕುಳದ ಬಗ್ಗೆ ಯಾವುದೇ ಆರೋಪ ಮಾಡಿರಲಿಲ್ಲ ಮತ್ತು ಲೈಂಗಿಕ ಕಿರುಕುಳ ಎದುರಿಸಿದ ಯಾವುದೇ ಮಹಿಳಾ ಕುಸ್ತಿಪಟುವಿನ ಹೆಸರನ್ನು ಪ್ರಸ್ತಾಪಿಸಿರಲಿಲ್ಲ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ಎಲ್ಲಾ ಸಂತ್ರಸ್ತರು ಮಾಡಿರುವ ಆರೋಪಗಳಲ್ಲಿ ಒಂದೇ ರೀತಿಯ ಹೋಲಿಕೆ ಇದೆ ಎಂದು ನ್ಯಾಯಾಲಯ ತಿಳಿಸಿದೆ. ಆದರೆ, ದೂರುದಾರರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಲ್ಲಿ ಗಂಭೀರ ವಿರೋಧಾಭಾಸಗಳಿದ್ದು, ಇದು ಪ್ರಾಸಿಕ್ಯೂಷನ್ ಕಥೆಯನ್ನು ಅನುಮಾನಿಸುವಂತೆ ಮಾಡಲು ಸಾಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಆಧಾರವಾಗಿದ್ದ ಐವರು ಸಂತ್ರಸ್ತರ ಪೈಕಿ ಇಬ್ಬರು ಪ್ರಾಸಿಕ್ಯೂಷನ್ ಪರವಾಗಿ ನಿಲ್ಲಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

ದೂರುಗಳು ದೀರ್ಘ ಸಮಯದ ಬಳಿಕ ದಾಖಲಾಗಿರುವುದರಿಂದ, ಈ ಆರೋಪಗಳು ನಂಬಲರ್ಹವಾಗಿಲ್ಲದೆ, ಮೊದಲೇ ಸಿದ್ಧಪಡಿಸಿದ ಮತ್ತು ವ್ಯವಸ್ಥಿತವಾಗಿ ಹೆಣೆದಂತೆ ಕಾಣಿಸುತ್ತವೆ ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ, ಘಟನೆಗಳ ಬಳಿಕವೂ ಸಾಕ್ಷಿಗಳು ಆರೋಪಿಯೊಂದಿಗೆ ಸ್ನೇಹಪೂರ್ವಕ ಸಂಬಂಧ ಹೊಂದಿದ್ದರು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ಬೆರೆತಿದ್ದರು ಎಂಬುದನ್ನು ನ್ಯಾಯಾಲಯ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News