Rajasthan | ಹೊಲದಲ್ಲಿ ರಹಸ್ಯವಾಗಿ 5 ಲಕ್ಷ ರೂ. ಹೂತಿಟ್ಟ ಸ್ಥಳ ಮರೆತ ರೈತ; ಮುಂದೇನಾಯ್ತು?
Photo: Dinesh Bohra/ITG
ಜೈಸಲ್ಮೇರ್, ಆ. 10: ಹೊಲದಲ್ಲಿ ರಹಸ್ಯವಾಗಿ ಹೂತಿಟ್ಟಿದ್ದ 5 ಲಕ್ಷ ರೂ. ಹಣವನ್ನು ಎಲ್ಲಿ ಹೂತಿದ್ದೇನೆ ಎಂಬುದನ್ನು ಮರೆತ ರೈತನೊಬ್ಬ, ಸುಮಾರು ಒಂದು ವರ್ಷದ ಬಳಿಕ ಅದನ್ನು ಪತ್ತೆಹಚ್ಚಿದಾಗ ಹಣದ ಬಹುತೇಕ ಭಾಗ ಗೆದ್ದಲುಗಳಿಂದ ನಾಶವಾಗಿರುವ ಘಟನೆ ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಡೆದಿದೆ.
ಪಚ್ಪದ್ರಾ ನಿವಾಸಿ ರೈತ ಮಂಗಿಲಾಲ್ ಮೇಘವಾಲ್ ಅವರು ಈ ನಷ್ಟ ಅನುಭವಿಸಿದವರು. ಸುಮಾರು ಒಂದು ವರ್ಷದ ಹಿಂದೆ ತಮ್ಮ ಜಮೀನನ್ನು ಮಾರಾಟ ಮಾಡಿದ್ದ ಅವರಿಗೆ 5 ಲಕ್ಷ ರೂ. ದೊರೆತಿತ್ತು. ಜಮೀನಿನಲ್ಲಿ ಒಂದು ಕೋಣೆ ನಿರ್ಮಿಸಲು ಆ ಹಣವನ್ನು ಬಳಸಲು ಅವರು ಉದ್ದೇಶಿಸಿದ್ದರು. ಆದರೆ ಹಣವನ್ನು ಮನೆಯಲ್ಲಿಟ್ಟರೆ ಕುಟುಂಬದ ಸದಸ್ಯರು ಕದ್ದುಬಿಡಬಹುದು ಅಥವಾ ಖರ್ಚು ಮಾಡಬಹುದು ಎಂಬ ಭಯದಿಂದ, ಯಾರಿಗೂ ಹೇಳದೆ ಅದನ್ನು ಮರೆಮಾಚಲು ನಿರ್ಧರಿಸಿದ್ದರು.
ಒಂದು ರಾತ್ರಿ 5 ಲಕ್ಷ ರೂ. ಹಣವನ್ನು ಪಾಲಿಥಿನ್ ಚೀಲದಲ್ಲಿ ಹಾಕಿ, ಹೊಲದಲ್ಲಿ ಗುಂಡಿ ತೆಗೆದು ಅದರಲ್ಲಿ ಹೂತಿಟ್ಟಿದ್ದರು. ಮದ್ಯಪಾನ ಮಾಡುವ ಅಭ್ಯಾಸ ಹೊಂದಿರುವ ಮಂಗಿಲಾಲ್ ಅವರಿಗೆ ಮರೆವಿನ ಸಮಸ್ಯೆಯೂ ಇದೆ. ಬಳಿಕ ಕೋಣೆ ನಿರ್ಮಿಸಲು ಹಣದ ಅಗತ್ಯಬಂದಾಗ, ಹಣವನ್ನು ನಿಖರವಾಗಿ ಎಲ್ಲಿ ಹೂತಿಟ್ಟಿದ್ದೆ ಎಂಬುದು ಅವರಿಗೆ ನೆನಪಾಗಲಿಲ್ಲ.
ತಮ್ಮ ಸುಮಾರು 10 ಬಿಘಾ ಜಮೀನಿನಲ್ಲಿ ಹಲವು ದಿನಗಳ ಕಾಲ ಹುಡುಕಾಡಿದರೂ ಹಣ ಪತ್ತೆಯಾಗಲಿಲ್ಲ. ಕೊನೆಗೆ ಮಂಗಿಲಾಲ್ ತಮ್ಮ ಪತ್ನಿ ಮತ್ತು ಪುತ್ರರಿಗೆ ಹಣ ಹೂತಿಟ್ಟಿದ್ದ ವಿಷಯ ತಿಳಿಸಿದರು. ಆರಂಭದಲ್ಲಿ ಅವರು ಮಂಗಿಲಾಲ್ ಮಾತನ್ನು ನಂಬಲಿಲ್ಲ. ಬಳಿಕ ಹುಡುಕಾಟದಲ್ಲಿ ಅವರೂ ಸೇರಿಕೊಂಡರು. ಆದರೆ ಹಲವು ದಿನಗಳ ಹುಡುಕಾಟದ ಬಳಿಕವೂ ಹಣ ಸಿಗಲಿಲ್ಲ. ಕೊನೆಗೆ ಕುಟುಂಬ ಹುಡುಕಾಟ ಕೈಬಿಟ್ಟಿತು. ಈ ವಿಚಾರವನ್ನು ಅವರು ಬೇರೆ ಯಾರಿಗೂ ತಿಳಿಸಿರಲಿಲ್ಲ.
ಸುಮಾರು ಒಂದು ವರ್ಷದ ಬಳಿಕ ಮಳೆಯಾಯಿತು. ಬಿತ್ತನೆಗಾಗಿ ಹೊಲ ಸಿದ್ಧಪಡಿಸಲು ಕುಟುಂಬ ಮುಂದಾಯಿತು. ಗುರುವಾರ ರಾತ್ರಿ ಟ್ರ್ಯಾಕ್ಟರ್ ಮೂಲಕ ಹೊಲ ಉಳುಮೆ ಮಾಡುತ್ತಿದ್ದಾಗ ಮಣ್ಣಿನಲ್ಲಿ ಹೂತಿಟ್ಟಿದ್ದ ಹಣದ ಚೀಲ ಆಕಸ್ಮಿಕವಾಗಿ ಮೇಲಕ್ಕೆ ಬಂದಿದೆ. ಆದರೆ ಕತ್ತಲಾಗಿದ್ದ ಕಾರಣ ಆ ವೇಳೆ ಯಾರ ಗಮನಕ್ಕೂ ಅದು ಬಂದಿರಲಿಲ್ಲ.
ಶುಕ್ರವಾರ ಬೆಳಿಗ್ಗೆ ಮಂಗಿಲಾಲ್ ಅವರ ಪತ್ನಿ ಮತ್ತು ಪುತ್ರ ಹೊಲದ ಸುತ್ತಲಿನ ಬೇಲಿಯನ್ನು ದುರಸ್ತಿ ಮಾಡುತ್ತಿದ್ದರು. ಈ ವೇಳೆ ಹರಿದು ಹಾನಿಗೊಳಗಾದ ಚೀಲವೊಂದು ಅವರ ಕಣ್ಣಿಗೆ ಬಿತ್ತು. ಚೀಲ ತೆರೆದು ನೋಡಿದಾಗ 500 ರೂ. ಮುಖಬೆಲೆಯ ನೋಟುಗಳ ಅವಶೇಷಗಳು ಪತ್ತೆಯಾದವು. ಸುಮಾರು ಒಂದು ವರ್ಷ ಮಣ್ಣಿನಲ್ಲಿ ಹೂತಿದ್ದ ಹಣವನ್ನು ಗೆದ್ದಲುಗಳು ತಿಂದುಹಾಕಿದ್ದವು. ನೋಟುಗಳು ತುಂಡು ತುಂಡಾಗಿದ್ದವು.
ಕುಟುಂಬದವರು ಹಾನಿಗೊಳಗಾದ ನೋಟುಗಳ ಅವಶೇಷಗಳನ್ನು ಸಂಗ್ರಹಿಸಿ ಪಚ್ಪದ್ರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಕೊಂಡೊಯ್ದರು. ಆದರೆ ನೋಟುಗಳ ಸ್ಥಿತಿಯನ್ನು ಗಮನಿಸಿದ ಬ್ಯಾಂಕ್ ಅವುಗಳನ್ನು ಸ್ವೀಕರಿಸಲು ನಿರಾಕರಿಸಿತು. ಬಳಿಕ ಬಲೋತ್ರಾದಲ್ಲಿರುವ ಬ್ಯಾಂಕಿನ ಮುಖ್ಯ ಶಾಖೆಗೆ ತೆರಳಿದರೂ ಅಲ್ಲಿಯೂ ನಿರಾಶೆಯಾಯಿತು. ಜೈಪುರದಲ್ಲಿರುವ ಬ್ಯಾಂಕ್ ಅನ್ನು ಸಂಪರ್ಕಿಸುವಂತೆ ಕುಟುಂಬಕ್ಕೆ ಸೂಚಿಸಲಾಯಿತು.
ಮಂಗಿಲಾಲ್ ಅನಕ್ಷರಸ್ಥರಾಗಿದ್ದು, ಆರ್ಥಿಕವಾಗಿಯೂ ದುರ್ಬಲರಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಜೈಪುರಕ್ಕೆ ಪ್ರಯಾಣಿಸಿ ಬ್ಯಾಂಕ್ ಅನ್ನು ಸಂಪರ್ಕಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.
ತಮ್ಮ ತಪ್ಪಿನ ಬಗ್ಗೆ ಮಂಗಿಲಾಲ್ ಈಗ ತೀವ್ರವಾಗಿ ವಿಷಾದಿಸುತ್ತಿದ್ದಾರೆ. ಮನೆಯಲ್ಲಿ ಇಟ್ಟಿರುವ ಹರಿದ ನೋಟುಗಳ ಅವಶೇಷಗಳನ್ನು ನೋಡುತ್ತಾ ಅವರ ಪತ್ನಿ ಕಣ್ಣೀರಿಡುತ್ತಿದ್ದಾರೆ. ಆ ಸಮಯದಲ್ಲೇ ಪತಿ ಹಣದ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದರೆ, ಇಷ್ಟೊಂದು ದೊಡ್ಡ ನಷ್ಟವನ್ನು ತಪ್ಪಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.
ರಹಸ್ಯವಾಗಿ ಹಣವನ್ನು ಹೊಲದಲ್ಲಿ ಹೂತಿಟ್ಟಿದ್ದಕ್ಕಾಗಿ ಮಂಗಿಲಾಲ್ ಅವರ ಪುತ್ರನೂ ತಂದೆಯನ್ನು ದೂಷಿಸುತ್ತಿದ್ದಾರೆ. ಯಾರಿಗೂ ತಿಳಿಸದೆ ಹಣವನ್ನು ಮರೆಮಾಚಿದ್ದೇ ಈ ನಷ್ಟಕ್ಕೆ ಕಾರಣ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.