"ಜನರೇಷನ್ ಗಟರ್" ಹೇಳಿಕೆ ವಿವಾದ: ನಾನು ಟೀಕಿಸಿದ್ದು ಕೆಲ ಪ್ರತಿಭಟನಾಕಾರರನ್ನು ಮಾತ್ರ; Gen Z ಅಲ್ಲ ಎಂದ ಕಂಗನಾ ರಣಾವತ್

Update: 2026-07-30 15:49 IST
Photo | ಕಂಗನಾ ರಣಾವತ್ | Photo Credit : PTI

ಹೊಸದಿಲ್ಲಿ: 'ಜನರೇಷನ್ ಗಟರ್' (Generation Gutter) ಎಂಬ ತಮ್ಮ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ ಬುಧವಾರ ಇನ್‌ಸ್ಟಾಗ್ರಾಮ್‌ ನಲ್ಲಿ ವಿಡಿಯೊ ಪ್ರಕಟಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ಇಡೀ Gen Z ಪೀಳಿಗೆಯನ್ನು ಟೀಕಿಸಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಪ್ರದರ್ಶಿಸಿದ್ದ ಕೆಲ ಪ್ರತಿಭಟನಾಕಾರರನ್ನು ಮಾತ್ರ ಟೀಕಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ ವಿಡಿಯೋದಲ್ಲಿ ಮಾತನಾಡಿದ ಅವರು, "ಮಾಧ್ಯಮದ ಸ್ನೇಹಿತರಿಗಾಗಿ ಈ ವಿಡಿಯೊ ಮಾಡುತ್ತಿದ್ದೇನೆ. ಮಕ್ಕಳ, ಮಹಿಳೆಯರ ಹಾಗೂ ಹಿರಿಯರ ಎದುರು ಬೀದಿಗಳಲ್ಲಿ ಅನೈತಿಕ ಮತ್ತು ಅಸಭ್ಯ ವರ್ತನೆ ಪ್ರದರ್ಶಿಸುತ್ತಿದ್ದ ಕೆಲ ಪ್ರತಿಭಟನಾಕಾರರನ್ನು ನಾನು ಟೀಕಿಸಿದ್ದೆ. ಆದರೆ, ಅದನ್ನು ಇಡೀ ಪೀಳಿಗೆಯ ವಿರುದ್ಧದ ಹೇಳಿಕೆಯಂತೆ ಬಿಂಬಿಸಲಾಗಿದೆ. ಇಂತಹ ವರ್ತನೆಯನ್ನು ನಮ್ಮ ಸಮಾಜ ಒಪ್ಪುವುದಿಲ್ಲ" ಎಂದು ಹೇಳಿದರು.

"ನಮ್ಮ ಮಕ್ಕಳು ಇಂತಹ ಅನೈತಿಕ ವರ್ತನೆಯ ಪ್ರಭಾವಕ್ಕೆ ಒಳಗಾಗಬಾರದು. ಹಿರಿಯರ ಎದುರು ಇಂತಹ ಘಟನೆಗಳು ನಡೆದರೆ ನಮಗೆ ನಾಚಿಕೆಯಾಗುತ್ತದೆ. ಈ ರೀತಿಯ ವರ್ತನೆಯನ್ನು ಸಾಮಾನ್ಯವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೂ ಮಾಧ್ಯಮಗಳು ನನ್ನ ವಿರುದ್ಧ ಗುಂಪುಗೂಡುತ್ತಿವೆ" ಎಂದು ಆರೋಪಿಸಿದರು.

Gen Z ಯುವಕರಲ್ಲಿ ಅನೇಕರು ದೇಶದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದ ಕಂಗನಾ, ಸ್ಕೈರೂಟ್‌ನಂತಹ ಸ್ಟಾರ್ಟ್‌ಅಪ್‌ಗಳು, ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಕುಟುಂಬದ ಜವಾಬ್ದಾರಿಗಳನ್ನು ಹೊತ್ತಿರುವ ಯುವಕರನ್ನು ಶ್ಲಾಘಿಸಿದರು.

"ಸ್ಕೈರೂಟ್‌ನಂತಹ ಸ್ಟಾರ್ಟ್‌ಅಪ್‌ಗಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿವೆ. ನೀಟ್ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸಿದ್ದೇನೆ. ನಮ್ಮ ತಂಡದಲ್ಲಿಯೂ, ಕುಟುಂಬದಲ್ಲಿಯೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಜೆನ್ ಝಡ್ ಯುವಕರು ಇದ್ದಾರೆ. ಆದರೆ ಕೆಲ ಸಾಮಾಜಿಕ ಜಾಲತಾಣ ಅನುಯಾಯಿಗಳು, ಕಾಮೆಂಟ್‌ಗಳು ಮತ್ತು 'ಲೈಕ್'ಗಳಿಗಾಗಿ ಮಾಧ್ಯಮಗಳು ನನ್ನ ವಿರುದ್ಧ ತಪ್ಪು ಪ್ರಚಾರ ನಡೆಸುತ್ತಿವೆ" ಎಂದು ಹೇಳಿದರು.

ಕೆಲವು ನಿರೂಪಕರು ಹಾಗೂ ತಮ್ಮನ್ನು ಸ್ತ್ರೀವಾದಿಗಳು ಎಂದು ಕರೆದುಕೊಳ್ಳುವವರು ಘನತೆ ಮತ್ತು ಶಿಸ್ತಿನ ಬಗ್ಗೆ ತಮಗೆ ಪಾಠ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, "ನಮ್ಮ ಪೀಳಿಗೆಯ ಮಹಿಳೆಯರಿಗೆ ಘನತೆ ಮತ್ತು ಶಿಸ್ತಿನ ಬಗ್ಗೆ ಸಾಕಷ್ಟು ಒತ್ತಡವಿತ್ತು. ಈಗಿನ ಪೀಳಿಗೆಗೆ ಅದನ್ನು ಹೇಳಬಾರದೇ? ನಿಮ್ಮ ಮಕ್ಕಳಿಗೆ ಶಿಸ್ತಿನಿಂದ ಇರಲು ಕಲಿಸುವುದಿಲ್ಲವೇ? ಈಗ ಎಲ್ಲರೂ ಕೇವಲ ಪ್ರದರ್ಶನ ಮಾಡಲು ಬಯಸುತ್ತಿದ್ದಾರೆ" ಎಂದರು.

ವೈಯಕ್ತಿಕ ಸ್ವಾತಂತ್ರ್ಯವು ಇತರರ ಹಕ್ಕುಗಳಿಗೆ ಧಕ್ಕೆ ತರುವಂತಿರಬಾರದು ಎಂದು ಪ್ರತಿಪಾದಿಸಿದ ಕಂಗನಾ, "ಸಂವಿಧಾನದ ಪ್ರಕಾರ ಬದುಕಬೇಕಾದರೆ ನಿಮ್ಮ ಸ್ವಾತಂತ್ರ್ಯವು ಇನ್ನೊಬ್ಬರ ಹಕ್ಕು ಆರಂಭವಾಗುವ ಸ್ಥಳದಲ್ಲಿ ಕೊನೆಗೊಳ್ಳಬೇಕು. ಮನೆಯಲ್ಲಿ ಏನು ಬೇಕಾದರೂ ಮಾಡಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಇತರರ ಭಾವನೆಗಳನ್ನು ಗೌರವಿಸಬೇಕು" ಎಂದು ಹೇಳಿದರು.

"ಕೆಲವರು ಪ್ರಧಾನಮಂತ್ರಿಯನ್ನು ನಾಯಕ ಎಂದು, ಕೆಲವರು ಸ್ನೇಹಿತ ಎಂದು, ಕೆಲವರು ಕುಟುಂಬ ಸದಸ್ಯ ಎಂದು, ಇನ್ನೂ ಕೆಲವರು ದೇವರಂತೆ ಗೌರವಿಸುತ್ತಾರೆ. ಆದ್ದರಿಂದ ಯಾರ ಭಾವನೆಗಳನ್ನೂ ನೋಯಿಸುವುದು ನಾಗರಿಕ ಪ್ರಜ್ಞೆಯಲ್ಲ. ಇದು ಆಧುನಿಕತೆ ಅಥವಾ ಧೈರ್ಯದ ಸಂಕೇತವೂ ಅಲ್ಲ" ಎಂದರು.

"ಕೆಲವು ಸ್ತ್ರೀವಾದಿಗಳು ಯುವಕರನ್ನು ಪ್ರಾಣಿವಾದದ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ನನ್ನ ಹಿರಿಯರು ಹಾಗೂ ಗುರುಗಳು ಜೀವನದ ಉದ್ದೇಶ ವಿಕಾಸ ಎಂದು ಕಲಿಸಿದ್ದಾರೆ. ನಾವು ಪ್ರಾಣಿ ಪ್ರವೃತ್ತಿಯತ್ತ ಹಿಂದಿರುಗಬಾರದು. ಉತ್ತಮ ಮನುಷ್ಯರಾಗುವತ್ತ ಸಾಗಬೇಕು. ಆದ್ದರಿಂದ ವಿಕಸನಗೊಳ್ಳಿ. ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು" ಎಂದು ಹೇಳಿದರು.

CJP ತಿರುಗೇಟು

ಕಂಗನಾ ರಾಣಾವತ್ ಮತ್ತು CJP ವಕ್ತಾರ ಸೌರವ್ ದಾಸ್ ನಡುವಿನ ವಾಕ್ಸಮರದ ಬಳಿಕ ಈ ವಿವಾದ ಮತ್ತಷ್ಟು ತೀವ್ರಗೊಂಡಿದೆ.

ಕಂಗನಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ದಾಸ್, "ಯುವಕರ ಬಗ್ಗೆ ಈ ರೀತಿಯ ಭಾಷೆಯನ್ನು ಬಳಸುವುದು ಮಾನಸಿಕವಾಗಿ ಸ್ಥಿರವಾಗಿರುವ ವ್ಯಕ್ತಿಯ ಮಾತಲ್ಲ. ನಿಮ್ಮ ಕುಟುಂಬದಲ್ಲೇ Gen Z ಅಥವಾ ಜನರಲ್ ಆಲ್ಫಾ ಪೀಳಿಗೆಯ ಸದಸ್ಯರಿದ್ದರೆ ಅವರ ವಿರುದ್ಧವೂ ಇದೇ ರೀತಿಯ ಪದಗಳನ್ನು ಬಳಸುತ್ತೀರಾ?" ಎಂದು ಪಿಟಿಐ ವಿಡಿಯೊಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಪ್ರಶ್ನಿಸಿದರು.

ಸಂಸದರಾಗಿ ಕಂಗನಾ ಅವರ ಕಾರ್ಯವೈಖರಿಯನ್ನೂ ಟೀಕಿಸಿದ ಅವರು, "ಕಂಗನಾ ರಾಣಾವತ್ ಅವರನ್ನು ಅವರ ಸ್ವಂತ ಪಕ್ಷದವರೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ತಮ್ಮ ಲೋಕಸಭಾ ಕ್ಷೇತ್ರದ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುವ ಬದಲು ವಿವಾದಾತ್ಮಕ ಹೇಳಿಕೆಗಳ ಮೂಲಕ ಗಮನ ಸೆಳೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ತಮ್ಮ ಕ್ಷೇತ್ರದ ಜನರನ್ನು ಭೇಟಿ ಮಾಡಿ ಎಂದು ಹೇಳುತ್ತಿರುವ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ" ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News