2021ರ ಪ್ರಕರಣ | SFI ನಾಯಕಿ ಐಶೆ ಘೋಷ್ ವಿರುದ್ಧದ ಜಾಮೀನು ರಹಿತ ವಾರಂಟ್ ರದ್ದು
ಐಶೆ ಘೋಷ್ | Photo Credit : thehindu.com
ಹೊಸದಿಲ್ಲಿ: 2021ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ SFI (ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ) ಜಂಟಿ ಕಾರ್ಯದರ್ಶಿ ಐಶೆ ಘೋಷ್ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್‌ಗಳನ್ನು (NBW) ದಿಲ್ಲಿಯ ನ್ಯಾಯಾಲಯ ಗುರುವಾರ ರದ್ದುಗೊಳಿಸಿದೆ.
ಐಶೆ ಘೋಷ್ ನ್ಯಾಯಾಲಯಕ್ಕೆ ಖುದ್ದು ಹಾಜರಾದ ಬಳಿಕ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿಜಯಶ್ರೀ ರಾಥೋಡ್ ಅವರು ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್ ಗಳನ್ನು ರದ್ದುಗೊಳಿಸಿದರು. ಈ ಕುರಿತು ವಿವರವಾದ ಆದೇಶವನ್ನು ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ.
ಬುಧವಾರ ನಡೆದ ವಿಚಾರಣೆಯಲ್ಲಿ ಐಶೆ ಘೋಷ್ ಪರ ವಕೀಲರು, ‘ಅನಿವಾರ್ಯ ಸಂದರ್ಭಗಳಿಂದಾಗಿ ಹಿಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯವು ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್‌ಗಳ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು.
ಈ ಪ್ರಕರಣವು 2021ರಲ್ಲಿ ದಿಲ್ಲಿಯ ಬಾರಾಖಂಬಾ ರಸ್ತೆ ಪೊಲೀಸ್ ಠಾಣೆಯಲ್ಲಿ ಐಶೆ ಘೋಷ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದೆ. ಹಿಂದಿನ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 188 (ಸಾರ್ವಜನಿಕ ಸೇವಕರು ನೀಡಿದ ಆದೇಶ ಉಲ್ಲಂಘನೆ), ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ) ಹಾಗೂ ಸೆಕ್ಷನ್ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 21ಕ್ಕೆ ಮುಂದೂಡಿದೆ.