ವಂದೇ ಮಾತರಂಗೆ ಅವಮಾನ ಮಾಡಿದರೆ 3 ವರ್ಷ ಜೈಲು: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
Photo |PTI
ಹೊಸದಿಲ್ಲಿ: ರಾಷ್ಟ್ರೀಯ ಗೀತೆ 'ವಂದೇ ಮಾತರಂ'ಗೆ ಅವಮಾನ ಮಾಡುವುದನ್ನು ದಂಡನೀಯ ಅಪರಾಧದ ವ್ಯಾಪ್ತಿಗೆ ತರುವ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ–2026 ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ.
ಈ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ಆದ್ದರಿಂದ ರಾಷ್ಟ್ರಪತಿ ಅವರ ಅಂಕಿತದ ಬಳಿಕ ತಿದ್ದುಪಡಿ ಕಾನೂನಾಗಿ ಜಾರಿಗೆ ಬರಲಿದೆ.
ಲೋಕಸಭೆಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮ ಕೈಗೊಂಡಿರುವ ವಿಷಯದ ಕುರಿತು ಚರ್ಚೆಗೆ ಆಗ್ರಹಿಸಿ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಗದ್ದಲದ ನಡುವೆಯೇ ಮಸೂದೆಯನ್ನು ಪರಿಗಣನೆಗೆ ತೆಗೆದುಕೊಂಡು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ತಿದ್ದುಪಡಿ ಜಾರಿಗೆ ಬಂದ ಬಳಿಕ, 'ವಂದೇ ಮಾತರಂ' ಹಾಡುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಅವಮಾನಿಸುವುದು, ಹಾಡಲು ಅಡ್ಡಿಪಡಿಸುವುದು ಅಥವಾ ಯಾವುದೇ ರೀತಿಯಲ್ಲಿ ಅಡಚಣೆ ಉಂಟುಮಾಡುವುದು ಶಿಕ್ಷೆಯ ವ್ಯಾಪ್ತಿಗೆ ಬರಲಿದೆ. ಅಂತಹ ಕೃತ್ಯಗಳಿಗೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.