ಯಾವುದೇ ನಾಟಕದಿಂದ ಸತ್ಯ ಮರೆಮಾಚಲು ಸಾಧ್ಯವಿಲ್ಲ : ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತ ಛೀಮಾರಿ
Photo | timesofindia
ಹೊಸದಿಲ್ಲಿ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಮಾಡಿದ ಭಾಷಣಕ್ಕೆ ಭಾರತ ಶನಿವಾರ ತೀಕ್ಷ್ಣವಾದ ತಿರುಗೇಟು ನೀಡಿದೆ. ಅವರ ಭಾಷಣವನ್ನು "ಅಸಂಬದ್ಧ ನಾಟಕ" ಎಂದು ತಳ್ಳಿಹಾಕಿದೆ ಮತ್ತು "ಯಾವುದೇ ನಾಟಕದಿಂದ ಸತ್ಯಗಳನ್ನು ಮರೆಮಾಚಲು ಸಾಧ್ಯವಿಲ್ಲ" ಎಂದು ಹೇಳಿದೆ.
ಶೆಹಬಾಝ್ ಷರೀಫ್ ಭಾಷಣಕ್ಕೆ ಪ್ರತಿಕ್ರಿಯಿಸಿದ ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೆಟಲ್ ಗಹ್ಲೋಟ್, ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿದ್ದಾರೆ. ಭಯೋತ್ಪಾದಕರನ್ನು ವೈಭವೀಕರಿಸುವುದು ಮತ್ತು ನಿಂದಿಸುವುದು ಪಾಕಿಸ್ತಾನದ ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದಾರೆ.
ಯಾವುದೇ ನಾಟಕ ಅಥವಾ ಸುಳ್ಳಿನಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಅನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಬರ್ಬರ ಹತ್ಯಾಕಾಂಡವನ್ನು ನಡೆಸಿದ ಜವಾಬ್ದಾರಿಯಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ರಕ್ಷಿಸಿದ್ದು ಇದೇ ಪಾಕಿಸ್ತಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಯೋತ್ಪಾದನೆಯನ್ನು ಹುಟ್ಟು ಹಾಕುವಲ್ಲಿ ಮತ್ತು ರಪ್ತು ಮಾಡುವಲ್ಲಿ ನಿರತವಾಗಿರುವ ಪಾಕಿಸ್ಥಾನ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದೆ. ಈಗ ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಪಾಲುದಾರನಂತೆ ನಟಿಸುತ್ತಿದೆ. ಆದರೆ, ಇದೇ ದೇಶ ಒಸಾಮಾ ಬಿನ್ ಲಾಡೆನ್‌ಗೆ ಒಂದು ದಶಕದ ಕಾಲ ಆಶ್ರಯ ನೀಡಿತ್ತು. ಇಂತಹ ದ್ವಂದ್ವ ನಿಲುವು ಈಗಲೂ ಮುಂದುವರಿಯುವುದು ಅಚ್ಚರಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.