Photo: TOI

ಹೊಸದಿಲ್ಲಿ: ಹಿರಿಯ ಸೇನಾ ಅಧಿಕಾರಿಗಳಿಗೆ 2023ರಲ್ಲಿ ಜಾರಿಗೆ ತಂದಿದ್ದ ಸಾಮಾನ್ಯ ಸಮವಸ್ತ್ರ ನಿಯಮವನ್ನು ಭಾರತೀಯ ಸೇನೆ ಹಿಂಪಡೆದಿದೆ. ಇದರಿಂದ ವಿವಿಧ ಶಸ್ತ್ರಾಸ್ತ್ರ ವಿಭಾಗಗಳು ಮತ್ತು ರೆಜಿಮೆಂಟ್‌ ಗಳಿಗೆ ಸೇರಿದ ಹಿರಿಯ ಅಧಿಕಾರಿಗಳು ತಮ್ಮ ಸೇವೆಯ ಸಾಂಪ್ರದಾಯಿಕ ಸಮವಸ್ತ್ರ ಹಾಗೂ ಗುರುತುಗಳನ್ನು ಮತ್ತೆ ಧರಿಸಲು ಅವಕಾಶ ದೊರೆಯಲಿದೆ.

ಗೂರ್ಖಾ ರೈಫಲ್ಸ್‌ ನ ಜನರಲ್‌ ಗಳು ತಮ್ಮ ವಿಶಿಷ್ಟ ಟೋಪಿಗಳನ್ನು, ವಿಶೇಷ ಪಡೆಗಳ ಅಧಿಕಾರಿಗಳು ಮೆರೂನ್ ಬೆರೆಟ್‌ ಗಳನ್ನು ಹಾಗೂ ಶಸ್ತ್ರಸಜ್ಜಿತ ರೆಜಿಮೆಂಟ್‌ ಗಳ ಹಿರಿಯ ಅಧಿಕಾರಿಗಳು ಕಪ್ಪು ಬೆರೆಟ್‌ ಗಳನ್ನು ಮತ್ತೆ ಧರಿಸಬಹುದು. ಈ ಕುರಿತು ನ. 13ರಂದು ಸೇನೆ ಆಂತರಿಕ ಆದೇಶ ಹೊರಡಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

2023ರಲ್ಲಿ ಬ್ರಿಗೇಡಿಯರ್ ಮತ್ತು ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ ಸಾಮಾನ್ಯ ಸಮವಸ್ತ್ರವನ್ನು ಸೇನೆ ಕಡ್ಡಾಯಗೊಳಿಸಿತ್ತು. ಹಿರಿಯ ಅಧಿಕಾರಿಗಳಲ್ಲಿ ಏಕರೂಪದ ಗುರುತು ಮತ್ತು ಸೇವಾ ವಿಷಯಗಳಲ್ಲಿ ಸಾಮಾನ್ಯ ವಿಧಾನವನ್ನು ಬಲಪಡಿಸುವುದು ಇದರ ಉದ್ದೇಶವಾಗಿತ್ತು.

2023ರ ಎಪ್ರಿಲ್‌ ನಲ್ಲಿ ಆಗಿನ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅದೇ ವರ್ಷದ ಆಗಸ್ಟ್‌ ನಲ್ಲಿ ಅದು ಜಾರಿಗೆ ಬಂದಿತ್ತು.

ಹೊಸ ನಿಯಮದಂತೆ ಹಿರಿಯ ಅಧಿಕಾರಿಗಳು ತಮ್ಮ ಶಸ್ತ್ರಾಸ್ತ್ರ ವಿಭಾಗ ಮತ್ತು ಸೇವೆಗಳಿಗೆ ನಿರ್ದಿಷ್ಟವಾದ ಸಮವಸ್ತ್ರದ ಗುರುತುಗಳನ್ನು ಧರಿಸುವಂತಿರಲಿಲ್ಲ. ಎಲ್ಲರೂ ಬಳಸುತ್ತಿದ್ದ ಭುಜದ ಲ್ಯಾನ್ಯಾರ್ಡ್‌ ಗಳನ್ನೂ ರದ್ದುಗೊಳಿಸಲಾಗಿತ್ತು. ಬದಲಿಗೆ ಕಡು ಹಸಿರು ಬೆರೆಟ್, ಪ್ರಮಾಣೀಕೃತ ಬೆಲ್ಟ್ ಹಾಗೂ ಹಿತ್ತಾಳೆಯ ಶ್ರೇಣಿಯ ಚಿಹ್ನೆಗಳನ್ನು ಧರಿಸುವಂತೆ ಸೂಚಿಸಲಾಗಿತ್ತು. ಎಲ್ಲ ಹಿರಿಯ ಅಧಿಕಾರಿಗಳು ಕಪ್ಪು ಬೂಟುಗಳನ್ನು ಮಾತ್ರ ಧರಿಸಬೇಕೆಂಬ ನಿಯಮವನ್ನೂ ಜಾರಿಗೆ ತರಲಾಗಿತ್ತು.

ಅಧಿಕಾರಿಗಳಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ ಸಮಗ್ರ ಪರಿಶೀಲನೆ ನಡೆಸಿದ ಬಳಿಕ 2023ರ ನಿರ್ದೇಶನವನ್ನು ಹಿಂಪಡೆಯಲಾಗಿದೆ ಎಂದು ನ.13ರ ಆದೇಶದಲ್ಲಿ ತಿಳಿಸಲಾಗಿದೆ.

ವಿವಿಧ ವಿಭಾಗಗಳಿಂದ ಸ್ವೀಕರಿಸಿದ ಪ್ರತಿಕ್ರಿಯೆಗಳ ಆಧಾರದ ಮೇಲೆ ಬ್ರಿಗೇಡಿಯರ್ ಮತ್ತು ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳ ಉಡುಗೆಗೆ ಸಂಬಂಧಿಸಿದ ಸೂಚನೆಗಳ ಸಮಗ್ರ ಪರಿಶೀಲನೆ ನಡೆಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಆದೇಶ ಡಿ. 1ರಿಂದ ಜಾರಿಗೆ ಬರಲಿದೆ. ಇದರೊಂದಿಗೆ ಸೇನೆಯ 2018ರ ಸಮವಸ್ತ್ರ ಕೈಪಿಡಿಯ ನಿಯಮಗಳನ್ನು ಮತ್ತೆ ಅನುಸರಿಸಲಾಗುತ್ತದೆ.

ಜೂ. 30ರಂದು ಜನರಲ್ ಧೀರಜ್ ಸೇಠ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳ ಬಳಿಕ ಈ ಬದಲಾವಣೆಯಾಗಿದೆ. ಶಸ್ತ್ರಸಜ್ಜಿತ ಪಡೆಗಳ ವಿಭಾಗಕ್ಕೆ ಸೇರಿದ ಅಧಿಕಾರಿಯಾಗಿರುವ ಸೇಠ್, ಇನ್ನು ಮುಂದೆ ಕಡು ಹಸಿರು ಬಣ್ಣದ ಬದಲಿಗೆ ಕಪ್ಪು ಬೆರೆಟ್ ಧರಿಸಲಿದ್ದಾರೆ. ಕಪ್ಪು ಬೂಟುಗಳ ಬದಲಿಗೆ ಕಂದು ಬಣ್ಣದ ಬೂಟುಗಳನ್ನು ಬಳಸಲಿದ್ದಾರೆ. ಸ್ಕಿನ್ನರ್ಸ್ ಹಾರ್ಸ್, ಪೂನಾ ಹಾರ್ಸ್ ಮತ್ತು ಸೆಂಟ್ರಲ್ ಇಂಡಿಯಾ ಹಾರ್ಸ್‌ ನಂತಹ ಆಯ್ದ ರೆಜಿಮೆಂಟ್‌ ಗಳ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಕಂದು ಬಣ್ಣದ ಬೂಟುಗಳನ್ನು ಧರಿಸುತ್ತಾರೆ.

2023ರಲ್ಲಿ ಜಾರಿಗೆ ಬಂದಿದ್ದ ಸಾಮಾನ್ಯ ಸಮವಸ್ತ್ರದಿಂದಾಗಿ ಹಿರಿಯ ಅಧಿಕಾರಿಗಳು ಯಾವ ರೆಜಿಮೆಂಟ್ ಅಥವಾ ಸೇವೆಗೆ ಸೇರಿದವರು ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಹೊಸ ಆದೇಶದಂತೆ ಅವರು ತಮ್ಮ ತಮ್ಮ ಶಸ್ತ್ರಾಸ್ತ್ರ ವಿಭಾಗ ಮತ್ತು ಸೇವೆಗಳಿಗೆ ನಿರ್ದಿಷ್ಟವಾದ ಬೆರೆಟ್‌ಗಳು, ಲ್ಯಾನ್ಯಾರ್ಡ್‌ಗಳು, ಬೆಲ್ಟ್‌ಗಳು ಹಾಗೂ ಭುಜದ ಶೀರ್ಷಿಕೆಗಳನ್ನು ಮತ್ತೆ ಧರಿಸಲಿದ್ದಾರೆ.

ಗೂರ್ಖಾ ರೈಫಲ್ಸ್, ಗರ್ವಾಲ್ ರೈಫಲ್ಸ್ ಮತ್ತು ರಜಪೂತ ರೈಫಲ್ಸ್‌ನಂತಹ ರೈಫಲ್ ರೆಜಿಮೆಂಟ್‌ಗಳ ಅಧಿಕಾರಿಗಳು ಚಿನ್ನದ ಬಣ್ಣದ ಶ್ರೇಣಿಯ ಚಿಹ್ನೆಗಳ ಬದಲಿಗೆ ಮತ್ತೆ ಕಪ್ಪು ಬಣ್ಣದ ಶ್ರೇಣಿಯ ಬ್ಯಾಡ್ಜ್‌ ಗಳನ್ನು ಧರಿಸಲಿದ್ದಾರೆ.

ಆದರೆ, 2023ರ ನಿರ್ದೇಶನವು ಕರ್ನಲ್ ಮತ್ತು ಅದಕ್ಕಿಂತ ಕೆಳಗಿನ ಶ್ರೇಣಿಯ ಅಧಿಕಾರಿಗಳ ಸಮವಸ್ತ್ರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಕಿರಿಯ ಹಂತದ ಸೇನಾ ನಾಯಕತ್ವಕ್ಕೆ ತಮ್ಮ ಶಸ್ತ್ರಾಸ್ತ್ರ ವಿಭಾಗ, ರೆಜಿಮೆಂಟ್ ಮತ್ತು ಸೇವೆಗಳಿಗೆ ಸಂಬಂಧಿಸಿದ ವಿಶಿಷ್ಟ ಗುರುತುಗಳು ಅಗತ್ಯವೆಂದು ಸೇನೆ ಭಾವಿಸಿದ್ದರಿಂದ ಅವರ ಸಮವಸ್ತ್ರವನ್ನು ಯಥಾಸ್ಥಿತಿಯಲ್ಲಿ ಉಳಿಸಲಾಗಿತ್ತು.

ಆಗ ಹಿರಿಯ ಅಧಿಕಾರಿಗಳಿಗೆ ಸಾಮಾನ್ಯ ಸಮವಸ್ತ್ರ ಪರಿಚಯಿಸುವುದರಿಂದ ಎಲ್ಲರಿಗೂ ಏಕರೂಪದ ಗುರುತು ದೊರೆಯಲಿದೆ ಮತ್ತು ಅದು ಸೇನೆಯ ನೈಜ ನೀತಿಯನ್ನು ಪ್ರತಿಬಿಂಬಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ಅಧಿಕಾರಿಗಳ ಪ್ರತಿಕ್ರಿಯೆ ಆಧರಿಸಿದ ಪರಿಶೀಲನೆಯ ಬಳಿಕ ಆ ನಿರ್ಧಾರವನ್ನು ಹಿಂಪಡೆಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Contributor - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.