́ʼಆಕಾಶವೇನೂ ಕಳಚಿ ಬೀಳುವುದಿಲ್ಲʼ: ಅಝಂ ಖಾನ್ಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ
ಅಝಂ ಖಾನ್ | Photo Credit : PTI
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಅವರಿಗೆ ಅಲಹಾಬಾದ್ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಜಾಮೀನು ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠದ ಮುಂದೆ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಮನವಿ ಮಾಡಿದರು.
ಅಝಂ ಖಾನ್ ಜೈಲಿನಿಂದ ಬಿಡುಗಡೆಯಾಗುವುದನ್ನು ತಡೆಯಲು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಬೇಕೆಂದು ED ಕೋರಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ, "ಆಕಾಶವೇನೂ ಕಳಚಿ ಬೀಳುವುದಿಲ್ಲ. ಅವರು ಮಧ್ಯಂತರ ಜಾಮೀನಿನ ಮೇಲೆಯೇ ಇರಲಿ" ಎಂದು ಹೇಳಿದರು. ಅಝಂ ಖಾನ್ ಅವರ ಬಿಡುಗಡೆಯನ್ನು ತಕ್ಷಣವೇ ತಡೆಯಲು ನ್ಯಾಯಾಲಯ ನಿರಾಕರಿಸಿದೆ.
ಅಲಹಾಬಾದ್ ಹೈಕೋರ್ಟ್ ಮಂಗಳವಾರ ಅಝಂ ಖಾನ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಮತ್ತೊಂದು ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಕೂಡಲೇ ಜೈಲಿನ ಗೇಟ್ ಬಳಿಯೇ ED ಅವರನ್ನು ಬಂಧಿಸಿತ್ತು. ಈಡಿಯ ಈ ಕ್ರಮ ಪೂರ್ವಗ್ರಹಪೀಡಿತವಾಗಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದು ನ್ಯಾಯಮೂರ್ತಿ ರಾಜೀವ್ ಗುಪ್ತಾ ಮತ್ತು ನ್ಯಾಯಮೂರ್ತಿ ದೇವೇಂದ್ರ ಸಿಂಗ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತ್ತು.
ಅಝಂ ಖಾನ್ ಅವರನ್ನು ಬಂಧಿಸಲು ಕಾರಣಗಳೇನು ಮತ್ತು ಆರೋಪಿತ ಅಪರಾಧಗಳಲ್ಲಿ ಅವರ ಪಾತ್ರವಿದೆ ಎಂದು ನಂಬಲು ಇರುವ ಆಧಾರಗಳೇನು ಎಂಬ ವಿವರಗಳನ್ನು ED ಲಿಖಿತ ರೂಪದಲ್ಲಿ ನೀಡಿರಲಿಲ್ಲ ಎಂದು ಹೈಕೋರ್ಟ್ ಗಮನಿಸಿತ್ತು. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮೊದಲು ಅಥವಾ ಹಾಜರುಪಡಿಸುವ ಸಂದರ್ಭದಲ್ಲಿ ಈ ವಿವರಗಳನ್ನು ನೀಡಬೇಕಿತ್ತು ಎಂದು ಪೀಠ ಹೇಳಿತ್ತು.
ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಆದೇಶವು ಅಂತಿಮ ಆದೇಶದ ಸ್ವರೂಪದಲ್ಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು.
"ಬಂಧನದ ಕಾರಣಗಳನ್ನು ಅಝಂ ಖಾನ್ ಅವರಿಗೆ ತಲುಪಿಸಲು ನಾವು ಪ್ರಯತ್ನಿಸಿದ್ದೆವು. ಆದರೆ, ಅವರು ಸ್ವೀಕರಿಸಲು ನಿರಾಕರಿಸಿದರು. ಈ ಸಂಗತಿಯನ್ನು ಪಂಚನಾಮೆಯಲ್ಲಿ ದಾಖಲಿಸಲಾಗಿದೆ. ವಿಡಿಯೋ ಸಾಕ್ಷ್ಯ ಇಲ್ಲದಿರುವುದು ಮತ್ತು ರಿಮಾಂಡ್ ನ್ಯಾಯಾಲಯದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸದಿರುವುದನ್ನು ಆಧರಿಸಿ ಹೈಕೋರ್ಟ್ ಈ ನಿರ್ಧಾರ ಕೈಗೊಂಡಿದೆ" ಎಂದು ಅವರು ಹೇಳಿದರು.
ಬಂಧನದ ಕಾರಣಗಳನ್ನು ರಿಮಾಂಡ್ ಪ್ರಕ್ರಿಯೆಗೂ ಮೊದಲು ನೀಡಲಾಗಿತ್ತೇ ಅಥವಾ ನಂತರ ನೀಡಲಾಗಿತ್ತೇ ಎಂಬ ಬಗ್ಗೆಯೂ ವಿವಾದವಿದೆ ಎಂದು ರಾಜು ತಿಳಿಸಿದರು.
"ಬಂಧನದ ಕಾರಣಗಳನ್ನು ನಾವು ಮೊದಲೇ ನೀಡಿದ್ದೆವು ಎಂಬುದು ನಮ್ಮ ವಾದ. ಆದೇಶ ಹೊರಡಿಸಿದ ಬಳಿಕ ಅವರು ಅದಕ್ಕೆ ಅನುಮೋದನೆ ನೀಡಿದರು. ನ್ಯಾಯಾಧೀಶರ ವರದಿಯನ್ನು ತರಿಸಿಕೊಳ್ಳುವಂತೆ ನಾವು ಕೋರಿದ್ದೆವು. ಆದರೆ, ಅದನ್ನು ತರಿಸಿಕೊಳ್ಳಲಿಲ್ಲ. ಹೈಕೋರ್ಟ್ ಆತುರದಲ್ಲಿ ಆದೇಶ ಹೊರಡಿಸಿದೆ. ನಮ್ಮ ಸಂಪೂರ್ಣ ಉತ್ತರವನ್ನು ಸಲ್ಲಿಸಲು ಕೂಡ ನಮಗೆ ಸಮಯಾವಕಾಶ ನೀಡಲಿಲ್ಲ. ವಿಚಾರಣೆಯ ಮೊದಲ ದಿನವೇ ಈ ಆದೇಶ ಹೊರಬಂದಿದೆ" ಎಂದು ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.