'ಜಂತರ್ ಮಂತರ್ ಬಿಡುವುದಿಲ್ಲ': ಎರಡನೇ ದಿನವೂ ಚಲೋ ಸಂಸದ್ ನಡೆಯಲಿದೆ ಎಂದ ಅಭೀಜಿತ್ ದೀಪ್ಕೆ

Update: 2026-07-21 08:10 IST

Photo : PTI

ಹೊಸದಿಲ್ಲಿ: ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಚಲೋ ಸಂಸದ್ ಎರಡನೇ ದಿನವೂ ಮುಂದುವರಿಯಲಿದೆ ಎಂದು ಸಿಜೆಪಿ ಸ್ಥಾಪಕ ಅಭೀಜಿತ್ ದೀಪ್ಕೆ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಸೋಮವಾರ ಸಂಸತ್ತಿನ ಕಡೆಗೆ ನಡೆದ ಮೆರವಣಿಗೆಯು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗಕ್ಕೆ ಸಾಕ್ಷಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಜಂತರ್ ಮಂತರ್ ಮತ್ತು ಅದರ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡಿದ್ದ ಇಂಡಿಯಾ ಟುಡೇ ಡಿಜಿಟಲ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ದೀಪ್ಕೆ, "ನಾವು ಮತ್ತೆ ಪಾದಯಾತ್ರೆ ನಡೆಸಲಿದ್ದೇವೆ. ನಾವು ಈ ಪ್ರತಿಭಟನಾ ಸ್ಥಳ ಜಂತರ್ ಮಂತರ್ ಬಿಟ್ಟು ಹೋಗುವುದಿಲ್ಲ" ಎಂದು ಹೇಳಿದ್ದಾರೆ.

ಮಳೆಯಲ್ಲಿ ಸಂಪೂರ್ಣವಾಗಿ ನೆನೆದಿದ್ದ ದೀಪ್ಕೆ, ಪಕ್ಷದ ಇತರೆ ನಾಯಕರೊಂದಿಗೆ ಮಾನವ ಸರಪಳಿಯ ಮುಂಭಾಗದಲ್ಲಿ ನಿಂತು ಘೋಷಣೆಗಳನ್ನು ಕೂಗಿದರು.

ಸೋಮವಾರ ಬೆಳಿಗ್ಗೆ ದಿಲ್ಲಿ ಪೊಲೀಸರು ಈ ಹಿಂದೆ ಇದ್ದ ವೇದಿಕೆಯನ್ನು ತೆರವುಗೊಳಿಸಿದ್ದರು ಎಂದು ವರದಿಯಾಗಿದೆ. ತದನಂತರ ಜಂತರ್ ಮಂತರ್‌ಗೆ ಹಿಂತಿರುಗಿದ CJP ಪ್ರತಿಭಟನಾಕಾರರು, ಅಲ್ಲಿ ಡೇರೆ ಹಾಕಿ ತಾತ್ಕಾಲಿಕ ವೇದಿಕೆಯನ್ನು ನಿರ್ಮಿಸಿಕೊಂಡಿದ್ದಾರೆ.

ಮಳೆಯ ನಡುವೆಯೂ ಜಂತರ್ ಮಂತರ್‌ನಲ್ಲಿ ವಾತಾವರಣ ಉದ್ವಿಗ್ನವಾಗಿಯೇ ಇದ್ದು, ಸ್ಥಳದಲ್ಲಿ ಕನಿಷ್ಠ ಸಾವಿರ ಪ್ರತಿಭಟನಾಕಾರರು ಮತ್ತು ನೂರಾರು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಸೋಮವಾರದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ಪೊಲೀಸರು, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು ಮತ್ತು ಲಾಠಿಚಾರ್ಜ್ ನಡೆಸಬೇಕಾಯಿತು ಎಂದು ತಿಳಿಸಿದ್ದಾರೆ.

ಎರಡನೇ ದಿನದ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳದಲ್ಲಿದ್ದ ಪೊಲೀಸರು, ಬಂದೋಬಸ್ತ್ ಮೊದಲಿನಂತೆಯೇ ಇರುತ್ತದೆ. ನಾವು ಬ್ಯಾರಿಕೇಡ್‌ಗಳನ್ನು ಮತ್ತೆ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ.

ಸೋಮವಾರ ತಡರಾತ್ರಿಯವರೆಗೂ ಜಂತರ್ ಮಂತರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳು ಬಾಧಿತವಾಗಿದ್ದವು.

ದಿಲ್ಲಿ ಪೊಲೀಸರು ಹಲವು ಎಫ್‌ಐಆರ್‌ಗಳನ್ನು ದಾಖಲಿಸಲು ಪ್ರಾರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ವೀಡಿಯೊಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಹಿಂಸಾಚಾರವು ಯಾವುದಾದರೂ ದೊಡ್ಡ ಸಂಚಿನ ಭಾಗವೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News