ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಮಿಶ್ರಾ ವಿರುದ್ಧ ‘ಲೀಗಲ್ ಕಾಕ್ರೋಚ್’ಗಳಿಂದ ಆ.20ಕ್ಕೆ ಪ್ರತಿಭಟನೆ; CJP ಬೆಂಬಲ

Update: 2026-08-19 22:32 IST

 ಮನನ್ ಕುಮಾರ್ ಮಿಶ್ರಾ | Photo Credit : ANI 

ಹೊಸದಿಲ್ಲಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ವಿರುದ್ಧ ‘ಕಾನೂನು ಕಾಕ್ರೋಚ್ ಗಳು’ ಗುರುವಾರ ಆ.20ರಂದು ಪ್ರತಿಭಟನೆ ನಡೆಸಲಿವೆ ಎಂದು ಕಾಕ್ರೋಚ್ ಜನತಾ ಪಕ್ಷದ (CJP) ಮುಖ್ಯ ವಕ್ತಾರ ಸೌರವ್ ದಾಸ್ ತಿಳಿಸಿದ್ದಾರೆ.

ಹೈದರಾಬಾದ್ ನ NALSAR ಕಾನೂನು ವಿಶ್ವವಿದ್ಯಾಲಯದ 2026ರ ಪದವಿ ಬ್ಯಾಚ್ ನ ನೋಂದಣಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ವಿವಾದದ ಹಿನ್ನೆಲೆಯಲ್ಲಿ ಮಿಶ್ರಾ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಅಖಿಲ ಭಾರತ ಯುವ ವಕೀಲರ ಸಂಘವೇ ಈ ಪ್ರತಿಭಟನೆಗೆ ಕರೆ ನೀಡಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಲ್ಲಿ ಜವಾಬ್ದಾರಿತನ ಇರಬೇಕು ಮತ್ತು ಉನ್ನತ ಮಟ್ಟದ ವೃತ್ತಿಪರ ನಡವಳಿಕೆ ಪಾಲಿಸಬೇಕು ಎಂಬ ಉದ್ದೇಶದಿಂದ ನಡೆಯುವ ಶಾಂತಿಯುತ ಪ್ರತಿಭಟನೆಗೆ ಸಂಘ ಬೆಂಬಲ ನೀಡಲಿದೆ ಎಂದು ಸೌರವ್ ದಾಸ್ ಹೇಳಿದ್ದಾರೆ.

ಮಿಶ್ರಾ ಅವರ ರಾಜೀನಾಮೆಗೆ ಬಾಂಬೆ ಬಾರ್ ಅಸೋಸಿಯೇಷನ್ ಕೂಡ ಮಂಗಳವಾರ ಆಗ್ರಹಿಸಿತ್ತು.

NALSAR ವಿದ್ಯಾರ್ಥಿಗಳ ವಿರುದ್ಧ BCI ಅಧ್ಯಕ್ಷ ಮನನ್ ಮಿಶ್ರಾ ತೆಗೆದುಕೊಂಡ ಕ್ರಮವನ್ನು ಬಾಂಬೆ ಬಾರ್ ಅಸೋಸಿಯೇಷನ್ ವಿರೋಧಿಸಿದೆ.

ಮಿಶ್ರಾ ನಂತರ ವಿದ್ಯಾರ್ಥಿಗಳ ಕ್ಷಮೆಯಾಚಿಸಿದ್ದರು. ಆದರೆ, ಅವರ ಕ್ಷಮೆಯಾಚನೆ ನಿಜವಾದ ಪಶ್ಚಾತ್ತಾಪವಲ್ಲ ಎಂದು ಬಾಂಬೆ ಬಾರ್ ಅಸೋಸಿಯೇಷನ್ ಹೇಳಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಮಾಡಲು ಮಾತ್ರ ಅವರು ಕ್ಷಮೆ ಕೇಳಿದ್ದಾರೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಆಗಸ್ಟ್ 18ರಂದು ನೀಡಿದ ಹೇಳಿಕೆಯಲ್ಲಿ, ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿತ್ತು ಎಂದು ಬಾಂಬೆ ಬಾರ್ ಅಸೋಸಿಯೇಷನ್ ಹೇಳಿದೆ.

►NALSAR ನೋಂದಣಿ ವಿವಾದ

ಸಿಜೆಐ ಸೂರ್ಯ ಕಾಂತ್ ಅವರ ಘಟಿಕೋತ್ಸವದಲ್ಲಿ ಭಾಗವಹಿಸುವುದನ್ನು ವಿರೋಧಿಸಿ NALSAR ವಿದ್ಯಾರ್ಥಿಗಳು ನಡೆಸಿದ ಅಭಿಯಾನದ ಹಿನ್ನೆಲೆಯಲ್ಲಿ, 2026ರ ಪದವಿ ಬ್ಯಾಚ್ ನ ನೋಂದಣಿಯನ್ನು ಸ್ಥಗಿತಗೊಳಿಸುವಂತೆ BCI ಆದೇಶಿಸಿತ್ತು.

ಕೆಲವೇ ಗಂಟೆಗಳ ಬಳಿಕ BCI ಆ ಆದೇಶವನ್ನು ಹಿಂಪಡೆದು, ನೋಂದಣಿ ನಿಷೇಧದ ಆದೇಶವನ್ನು ಮಾರ್ಪಡಿಸಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ರಾಜ್ಯ ಬಾರ್ ಕೌನ್ಸಿಲ್ಗಳಲ್ಲಿ ನೋಂದಾಯಿಸಿಕೊಳ್ಳಲು ಅರ್ಹರು ಎಂದು ತಿದ್ದುಪಡಿ ಆದೇಶದಲ್ಲಿ ತಿಳಿಸಿತು.

ಆದರೂ, ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮುಂದುವರಿಸುವುದಾಗಿ BCI ಸ್ಪಷ್ಟಪಡಿಸಿತು.

ಮಿಶ್ರಾ ಕ್ಷಮೆಯಾಚನೆ

ಸ್ವಾತಂತ್ರ್ಯ ದಿನದಂದು BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕಾನೂನು ವಿದ್ಯಾರ್ಥಿಗಳ ಕ್ಷಮೆಯಾಚಿಸಿದ್ದರು. ವಿವಾದಕ್ಕೆ ಸಂಬಂಧಿಸಿದ ತಮ್ಮ ಯಾವುದೇ ಮಾತುಗಳು ಅಥವಾ ಪತ್ರವು ವಿದ್ಯಾರ್ಥಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಪ್ರಾಮಾಣಿಕವಾಗಿ ವಿಷಾದಿಸುವುದಾಗಿ ಅವರು ಹೇಳಿದ್ದರು.

ವಿವಾದದಿಂದ ವಿದ್ಯಾರ್ಥಿ ಸಮುದಾಯದ ಒಂದು ವರ್ಗದಲ್ಲಿ ಕಳವಳ ಉಂಟಾಗಿದೆ ಎಂದು ಮಿಶ್ರಾ ಹೇಳಿದ್ದರು. ತಮ್ಮ ಮಾತುಗಳು ಅಥವಾ ಪತ್ರದಿಂದ ವಿದ್ಯಾರ್ಥಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುವುದಾಗಿ ಮಿಶ್ರಾ ಹೇಳಿದ್ದರು. ವಿಷಾದ ವ್ಯಕ್ತಪಡಿಸುವುದು ಪ್ರತಿಷ್ಠೆ ಅಥವಾ ಅಹಂಕಾರದ ವಿಷಯವಲ್ಲ; ವಿದ್ಯಾರ್ಥಿಗಳ ಭಾವನೆಗಳು ಮತ್ತು ಕಾಳಜಿಗಳು ಮುಖ್ಯವೆಂದು ಒಪ್ಪಿಕೊಳ್ಳುವುದಾಗಿದೆ ಎಂದಿದ್ದರು.

NALSAR ವಿವಾದದಲ್ಲಿ BCI ಹಸ್ತಕ್ಷೇಪಿಸುವ ಅಗತ್ಯವಿಲ್ಲ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆ ಶಾಂತಿಯುತ ಮತ್ತು ಕಾನೂನುಬದ್ಧವಾಗಿರುವವರೆಗೆ ಅವರಿಗೆ ಪ್ರತಿಭಟಿಸುವ ಹಕ್ಕಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News