ತಮ್ಮ ಎಕ್ಸ್ ಖಾತೆ ಡಿಲೀಟ್, ಹೈಡ್, ಡಿಆಕ್ಟಿವೇಟ್ ಮಾಡಿದ ಬಿಜೆಪಿಯ ಹೊಸ IT ಸೆಲ್ ತಂಡದ ಸದಸ್ಯರು!

ಶಿಂಜಿನಿ ಮಜುಂದಾರ್ - altnews. in ವರದಿ

Update: 2026-08-19 23:00 IST

Photo Credit : altnews.in

ಬಿಜೆಪಿ ಮಂಗಳವಾರ ತನ್ನ ನೂತನ ಸೋಷಿಯಲ್ ಮೀಡಿಯಾ ತಂಡವನ್ನು ಘೋಷಿಸಿದ ಬೆನ್ನಲ್ಲೇ, ನೂತನವಾಗಿ ನೇಮಕಗೊಂಡ ನಾಲ್ವರು ಸಹ-ಸಂಚಾಲಕರ ಎಕ್ಸ್ (X) ಖಾತೆಗಳು ಒಂದೋ ಡಿಲೀಟ್ ಆಗಿವೆ ಅಥವಾ ಅವುಗಳ ಪೋಸ್ಟ್ ಗಳು ಲಭ್ಯವಿಲ್ಲದಂತಾಗಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರು ಪ್ರೀತಿ ಗಾಂಧಿ, ಶಿವಾನಂದ್ ದ್ವಿವೇದಿ, ಅಲೋಕ್ ಭಟ್ ಮತ್ತು ಅರುಣ್ ಯಾದವ್ ಅವರನ್ನು ಸೋಷಿಯಲ್ ಮೀಡಿಯಾ ಸಹ-ಸಂಚಾಲಕರಾಗಿ ನೇಮಕ ಮಾಡಿದ್ದರು. ಆರಂಭದಲ್ಲಿ ಪ್ರೀತಿ ಗಾಂಧಿ ಅವರ ಪ್ರೊಫೈಲ್ ಕಾಣಿಸುತ್ತಿತ್ತಾದರೂ, ಅವರ ಖಾತೆಯಲ್ಲಿ ಯಾವುದೇ ಇತ್ತೀಚಿನ ಪೋಸ್ಟ್ ಗಳು ಇರಲಿಲ್ಲ. ಇದು ಅವರು ತಮ್ಮ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ ಎಂಬುದನ್ನು ಸೂಚಿಸುತ್ತಿತ್ತು. ಬಳಿಕ ಅವರ ಪ್ರೊಫೈಲ್ ಸಂಪೂರ್ಣವಾಗಿ ಕಣ್ಮರೆಯಾಗಿದ್ದು, "ಅಕೌಂಟ್ ಅಸ್ತಿತ್ವದಲ್ಲಿಲ್ಲ" (account doesn’t exist) ಎಂಬ ಸಂದೇಶ ಕಾಣಿಸುತ್ತಿದೆ. ಇನ್ನುಳಿದ ಮೂವರು ನಾಯಕರ ಎಕ್ಸ್ ಪ್ರೊಫೈಲ್ಗಳು ಸಹ ಪ್ರಸ್ತುತ ಲಭ್ಯವಿಲ್ಲ.

 

 

ಶಿವಾನಂದ್ ದ್ವಿವೇದಿ ಮತ್ತು ಅರುಣ್ ಯಾದವ್ ಅವರ ಎಕ್ಸ್ ಖಾತೆಗಳನ್ನು 'ಪ್ರೈವೇಟ್' ಮಾಡಲಾಗಿದ್ದು, ಅಲೋಕ್ ಭಟ್ ಅವರ ಎಕ್ಸ್ ಖಾತೆಯನ್ನು ಡಿಆಕ್ಟಿವೇಟ್ ಮಾಡಲಾಗಿದೆ.

2015ರಿಂದ ಪಕ್ಷದ ಸೋಷಿಯಲ್ ಮೀಡಿಯಾ ಸಂಚಾಲಕರಾಗಿದ್ದ ಅಮಿತ್ ಮಾಳವೀಯ ಅವರ ಸ್ಥಾನಕ್ಕೆ ದೀಪಕ್ ಮ್ಹಸ್ಕೆ ಅವರನ್ನು ನೇಮಕ ಮಾಡುವ ಮೂಲಕ, ಬಿಜೆಪಿ ತನ್ನ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಪುನರ್ರಚಿಸಿದೆ.

ದೀಪಕ್ ಮ್ಹಸ್ಕೆ ಅವರ ಎಕ್ಸ್ ಖಾತೆಯಿಂದ (@deepakmhaskey) ಪೋಸ್ಟ್ ಗಳನ್ನು ಡಿಲೀಟ್ ಮಾಡಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಆಗಸ್ಟ್ 17ರಂದು ಸಂಜೆ 5.19ಕ್ಕೆ ಅವರ ಖಾತೆಯಲ್ಲಿ 6,905 ಪೋಸ್ಟ್ ಗಳಿದ್ದವು. ಆದರೆ ಪ್ರಸ್ತುತ ಅವರ ಖಾತೆಯಲ್ಲಿ 5,563 ಪೋಸ್ಟ್ ಗಳು ಮಾತ್ರ ಕಾಣಿಸುತ್ತಿದ್ದು, ಒಟ್ಟು 1,342 ಪೋಸ್ಟ್ ಗಳು ಕಡಿಮೆಯಾಗಿವೆ.

 

ಅವರ ಟೈಮ್ ಲೈನ್ನಲ್ಲಿ ಈಗ ಕೇವಲ ಎರಡು ಪೋಸ್ಟ್ ಗಳು ಮಾತ್ರ ಲಭ್ಯವಿವೆ. ಇವೆರಡೂ ಆಗಸ್ಟ್ 17ರಂದು ಪೋಸ್ಟ್ ಮಾಡಲಾದವುಗಳಾಗಿದ್ದು, ಸೋಷಿಯಲ್ ಮೀಡಿಯಾ ಸಂಚಾಲಕರಾಗಿ ತಮ್ಮ ನೇಮಕಾತಿಗೆ ಸಂಬಂಧಿಸಿದ ವಿಷಯಗಳಾಗಿವೆ. ನೂತನ ಸಂಚಾಲಕರ ಹುದ್ದೆಗೆ ಬಂದ ವ್ಯಕ್ತಿಯ ಖಾತೆಯಲ್ಲೇ ಈ ರೀತಿ ಪೋಸ್ಟ್ ಗಳು ಕಡಿಮೆಯಾಗಿರುವುದು ಗಮನಾರ್ಹ.

 

ನೇಮಕಗೊಂಡಿರುವ ನಾಲ್ವರು ಸಹ-ಸಂಚಾಲಕರಲ್ಲಿ ಕನಿಷ್ಠ ಮೂವರು ಈ ಹಿಂದೆ ಕೋಮು ಪ್ರಚೋದಕ ಹೇಳಿಕೆಗಳನ್ನು ನೀಡಿದ ಮತ್ತು ಸುಳ್ಳು ಸುದ್ದಿಗಳನ್ನು ಹರಡಿದ ಹಿನ್ನೆಲೆ ಹೊಂದಿದ್ದಾರೆ. ಪ್ರೀತಿ ಗಾಂಧಿ ಅವರು ಕೋಮು ಪ್ರಚೋದಿತ ಸುಳ್ಳು ಸುದ್ದಿಗಳನ್ನು ಹಲವು ಬಾರಿ ಹರಡಿದ್ದು, ಅದನ್ನು Altnews ಫ್ಯಾಕ್ಟ್-ಚೆಕ್ ಮಾಡಿದೆ. ಅವರ ಎಕ್ಸ್ ಖಾತೆಯಲ್ಲಿ ನಾಥೂರಾಮ್ ಗೋಡ್ಸೆಯನ್ನು ಪದೇ ಪದೇ ಬೆಂಬಲಿಸಲಾಗಿದ್ದು, ಗಾಂಧಿ ಬದಲಿಗೆ ಗೋಡ್ಸೆ ಎಂಬ ಹೆಸರು ಹೊಂದಲು ಇಷ್ಟಪಡುವುದಾಗಿ ಅವರು ಈ ಹಿಂದೆ ಟ್ವೀಟ್ ಮಾಡಿದ್ದರು.

2014ರ ಮಾರ್ಚ್ ನಲ್ಲಿ, ನರೇಂದ್ರ ಮೋದಿ ಅವರ ಕುರಿತಾದ ಸುಳ್ಳು ಹೇಳಿಕೆಯೊಂದನ್ನು ಪ್ರಚಾರ ಮಾಡಿದ ಆರೋಪ ಪ್ರೀತಿ ಗಾಂಧಿ ಅವರ ಮೇಲಿತ್ತು. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಅವರು ಮೋದಿ ಅವರನ್ನು "ಭ್ರಷ್ಟಾಚಾರ ರಹಿತ" ಎಂದು ಹೊಗಳಿದ್ದಾರೆ ಎಂಬಂತಹ ಸುಳ್ಳು ಹೇಳಿಕೆಯನ್ನು ಪ್ರೀತಿ ಗಾಂಧಿ ಪ್ರಚಾರ ಮಾಡಿದ್ದರು. ಮೋದಿ ಅವರ ಬೆಂಬಲಿಗರು ಇದನ್ನು ಅಂತರರಾಷ್ಟ್ರೀಯ ಮಟ್ಟದ ಶ್ಲಾಘನೆ ಎಂದು ಬಿಂಬಿಸಿಕೊಂಡಿದ್ದರು.

 

ಇನ್ನೊಬ್ಬರಾದ ಅಲೋಕ್ ಭಟ್, ಮುಸ್ಲಿಂ ವಿರೋಧಿ ಹಾಗೂ ಸ್ತ್ರೀ ದ್ವೇಷದ ಹೇಳಿಕೆಗಳನ್ನು ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದರು. ಅವರು ಬರ್ಖಾ ದತ್ ಅವರಂತಹ ಹಿರಿಯ ಪತ್ರಕರ್ತರ ವಿರುದ್ಧವೂ ನಿಂದನೀಯ ಭಾಷೆ ಬಳಸಿದ್ದರು.

 

ಇನ್ನು ಹರಿಯಾಣ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥರಾಗಿದ್ದ ಅರುಣ್ ಯಾದವ್ ಅವರನ್ನು, 2017ರಿಂದ 2022ರ ನಡುವೆ ಮಾಡಲಾಗಿದ್ದ ಮುಸ್ಲಿಂ ವಿರೋಧಿ ಟ್ವೀಟ್ ಗಳ ಕಾರಣದಿಂದಾಗಿ 2022ರ ಜುಲೈ 7ರಂದು ಪಕ್ಷದಿಂದ ತೆಗೆದುಹಾಕಲಾಗಿತ್ತು. ಆ ಸಮಯದಲ್ಲಿ ಅವರ ಬಂಧನಕ್ಕೆ ಆಗ್ರಹಿಸಿ #ArrestArunYadav ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ 1,84,000ಕ್ಕೂ ಹೆಚ್ಚು ಟ್ವೀಟ್ ಗಳು ಬಂದಿದ್ದವು. ರಾಜ್ಯಾಧ್ಯಕ್ಷರು ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದರೂ, ಸೂಕ್ತ ಕಾರಣ ನೀಡಿರಲಿಲ್ಲ.

 

ಹೊಸ ಪದಾಧಿಕಾರಿಗಳನ್ನು ಅಭಿನಂದಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಮಾಳವೀಯ, ಅವರು 'ಸಂದಿಗ್ಧ ಸಮಯದಲ್ಲಿ' ನೇಮಕಗೊಂಡಿದ್ದಾರೆ ಎಂದು ಹೇಳಿದ್ದಾರೆ. ವಿಶೇಷವಾಗಿ ಸೋಷಿಯಲ್ ಮೀಡಿಯಾ ಸಹ-ಸಂಚಾಲಕರ ಬಗ್ಗೆ ಮಾತನಾಡಿದ ಅವರು, "ಅವರೆಲ್ಲರೊಂದಿಗೆ ಹತ್ತಿರದಿಂದ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಅವರ ನಾಯಕತ್ವದಲ್ಲಿ ಪಕ್ಷದ ಡಿಜಿಟಲ್ ಸಂವಹನವು 'ಹೊಸ ಮೈಲಿಗಲ್ಲುಗಳನ್ನು ಸಾಧಿಸಲಿದೆ ಹಾಗೂ ಭಾರತದ ಸಾರ್ವಜನಿಕ ಚರ್ಚೆಗಳನ್ನು ಸೃಜನಶೀಲತೆ ಮತ್ತು ಸ್ಪಷ್ಟತೆಯಿಂದ ಮುನ್ನಡೆಸಲಿದೆ'" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಾನಂದ್ ದ್ವಿವೇದಿ ಅವರ ಎಕ್ಸ್ ಖಾತೆ (@shiwadwivedi) ಮತ್ತೆ ಸಕ್ರಿಯವಾಗಿದೆ. ಗಮನಾರ್ಹ ವಿಷಯವೆಂದರೆ, ಅವರ ಒಟ್ಟು ಪೋಸ್ಟ್ ಗಳ ಸಂಖ್ಯೆ 10,800ರಿಂದ 10,200ಕ್ಕೆ ಕುಸಿದಿದೆ. ಅಂದರೆ ಸುಮಾರು 600 ಪೋಸ್ಟ್ ಗಳನ್ನು ಡಿಲೀಟ್ ಮಾಡಲಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ.

 

ಸೌಜನ್ಯ: altnews.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News