West Bengal | ಅಭಿಷೇಕ್ ಮೇಲಿನ ದಾಳಿ ಬಳಿಕ ಆಸ್ಪತ್ರೆ ಸಿಇಒ ಜೊತೆ ಮಮತಾ ಬ್ಯಾನರ್ಜಿ ಮಾತುಕತೆಯ ಆಡಿಯೋ ವೈರಲ್ : ವಿವಾದ ಸೃಷ್ಟಿ
Photo: PTI
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಯ ಬಳಿಕ, ಅವರ ಚಿಕಿತ್ಸೆಗೆ ಸಂಬಂಧಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ ಬೆಲ್ಲೆ ವ್ಯೂ ಆಸ್ಪತ್ರೆ(Belle Vue hospital) ಸಿಇಒ ಪ್ರದೀಪ್ ಟಂಡನ್ ಅವರೊಂದಿಗೆ ನಡೆಸಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ಆಡಿಯೋದಲ್ಲಿ, ಅಭಿಷೇಕ್ ಅವರ ಚಿಕಿತ್ಸೆಯ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, “ಕ್ಷಮಿಸಿ ಮಿಸ್ಟರ್ ಟಂಡನ್, ನೀವು ತಪ್ಪು ಮಾಡಿದ್ದೀರಿ. ನಾವು ನಿಮಗೆ ಮಾಡಿದ ಸಹಾಯವನ್ನು ನೆನಪಿಡಿ. ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ದಾರಿ ತಪ್ಪಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ನಿಮ್ಮ ಅಹಂಕಾರವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಈಗ ಬಿಜೆಪಿ ಅಧಿಕಾರದಲ್ಲಿದೆ. ನಾಳೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರದಿದ್ದರೆ, ನಾವು ಅದನ್ನು ನೋಡಿಕೊಳ್ಳುತ್ತೇವೆ” ಎಂದು ಹೇಳಿರುವುದಾಗಿ ವರದಿಯಾಗಿದೆ.
ಸೋನಾರ್‌ಪುರದಲ್ಲಿ ದಾಳಿ
ಚುನಾವಣೋತ್ತರ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲು ಕೋಲ್ಕತ್ತಾ ಸಮೀಪದ ಸೋನಾರ್‌ಪುರಕ್ಕೆ ತೆರಳಿದ್ದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಪ್ರತಿಭಟನಾಕಾರರ ಗುಂಪು ಕಲ್ಲು ಮತ್ತು ಮೊಟ್ಟೆ ತೂರಿ ದಾಳಿ ನಡೆಸಿತ್ತು. ಪ್ರತಿಭಟನಾಕಾರರು “ಚೋರ್, ಚೋರ್” ಎಂದು ಘೋಷಣೆ ಕೂಗಿದ್ದರು.
ದಾಳಿಯ ವೇಳೆ ಅಭಿಷೇಕ್ ಅವರು ಕ್ರಿಕೆಟ್ ಹೆಲ್ಮೆಟ್ ಧರಿಸಿದ್ದು, ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರು ಅವರನ್ನು ಸುರಕ್ಷಿತವಾಗಿ ಸ್ಥಳದಿಂದ ಕರೆದೊಯ್ದಿದ್ದರು. ಘಟನೆಯಲ್ಲಿ ಅವರ ಬಟ್ಟೆ ಕೂಡ ಹರಿದಿತ್ತು.
ದಾಳಿಯ ಬಳಿಕ ಮಾತನಾಡಿದ್ದ ಅಭಿಷೇಕ್, “ಇದು ಬಿಜೆಪಿ ಪ್ರಾಯೋಜಿತ ಕೃತ್ಯ. ನನ್ನನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ದಾಳಿ ನಡೆಸಲಾಗಿದೆ” ಎಂದು ಆರೋಪಿಸಿದ್ದರು.
ಅವರನ್ನು ಮೊದಲು ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಲ್ಲೆ ವ್ಯೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಆಸ್ಪತ್ರೆಯ ಮೇಲೆ ಒತ್ತಡ ಹೇರಲಾಗಿದೆ: ಮಮತಾ
ಅಭಿಷೇಕ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ಬಿಜೆಪಿ ನಾಯಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಸ್ಪತ್ರೆಯ ಮೇಲೆ ಒತ್ತಡ ಹೇರಿದ್ದರು ಎಂದು ಮಮತಾ ಆರೋಪಿಸಿದ್ದಾರೆ.
ದಾಳಿಯಿಂದಾಗಿ ಅಭಿಷೇಕ್ ಅವರ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿದ್ದು, ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ 3ಡಿ ಸಿಟಿ ಸ್ಕ್ಯಾನ್, ಅಲ್ಟ್ರಾಸೊನೋಗ್ರಫಿ (ಯುಎಸ್‌ಜಿ) ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಮಮತಾ ಆರೋಪಿಸಿದ್ದಾರೆ.
ಅಪೋಲೋ ಆಸ್ಪತ್ರೆಯ ವೈದ್ಯರು ಮನೆಯಲ್ಲೇ ವಿಶ್ರಾಂತಿ ಪಡೆಯಬಹುದು ಎಂದು ಸಲಹೆ ನೀಡಿದ್ದರೂ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಕುಟುಂಬದ ವೈದ್ಯರ ಮೇಲ್ವಿಚಾರಣೆಯಲ್ಲಿ ಮನೆಯಲ್ಲೇ ಚಿಕಿತ್ಸೆ ಮುಂದುವರಿಯಲಿದ್ದು, ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅವರ ನಿವಾಸದಲ್ಲಿ ಅಳವಡಿಸಲಾಗುತ್ತಿದೆ ಎಂದು ಮಮತಾ ತಿಳಿಸಿದ್ದಾರೆ.