×
Ad

Uttar Pradesh | ಮನೆಯ ಮುಂದೆ ಮಾಂಸದ ಚೀಲ ಪತ್ತೆಯಾಗಿದೆ ಎಂದು ಸುಳ್ಳು ದೂರು; ದೂರುದಾರನೇ ಚೀಲ ಇಟ್ಟಿದ್ದಾಗಿ ಸಿಸಿಟಿವಿಯಲ್ಲಿ ಬಹಿರಂಗ

Update: 2026-05-31 10:40 IST

ಸಾಂದರ್ಭಿಕ ಚಿತ್ರ

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಮಾವಿಮಿರಾ ಗ್ರಾಮದಲ್ಲಿ ಮನೆಯ ಹೊರಗೆ ಮಾಂಸದ ಚೀಲ ಪತ್ತೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ ವ್ಯಕ್ತಿಯೇ ಅದನ್ನು ಅಲ್ಲಿ ಇಟ್ಟಿದ್ದಾನೆ ಎಂಬುದು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

ಸೆನ್ಸರ್ ಪಾಲ್ ಅವರ ಪುತ್ರ ಪುನೀತ್ ಮೇ 29ರಂದು ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ, ತನ್ನ ಮನೆಯ ಹೊರಗೆ ಮಾಂಸ ತುಂಬಿದ ಚೀಲ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದ. ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಮನೆಯ ಸುತ್ತ ಜಮಾಯಿಸಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ದೂರಿನ ಆಧಾರದ ಮೇಲೆ ತನಿಖೆಯನ್ನೂ ಆರಂಭಿಸಲಾಯಿತು.

ಘಟನೆಯಿಂದ ಕೆಲವರು ಅಸಮಾಧಾನ ವ್ಯಕ್ತಪಡಿಸಿದಾಗ, ಪೊಲೀಸರು ಗ್ರಾಮಸ್ಥರು ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಇದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು ಮಾಂಸದ ಚೀಲವನ್ನು ತೆರವುಗೊಳಿಸಿ ಗುಂಡಿಯಲ್ಲಿ ಹೂತುಹಾಕಿದರು.

ತನಿಖೆಯ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, 12 ವರ್ಷದ ಮಾಯಾಂಕ್ ಎಂಬ ಬಾಲಕ ಸೈಕಲ್‌ನಲ್ಲಿ ಹಲವು ಚೀಲಗಳ ಮಾಂಸವನ್ನು ಸಾಗಿಸುತ್ತಿದ್ದಾಗ ತಿರುವು ಪಡೆಯುವ ಸಂದರ್ಭದಲ್ಲಿ ಒಂದು ಚೀಲ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ನಂತರ ಪುನೀತ್ ಆ ಚೀಲವನ್ನು ಎತ್ತಿಕೊಂಡು ತನ್ನ ಮನೆಯ ಸಮೀಪದ ಮುಖ್ಯ ರಸ್ತೆಯಲ್ಲಿ ಇರಿಸಿರುವುದೂ ದೃಶ್ಯಾವಳಿಯಲ್ಲಿ ದಾಖಲಾಗಿದೆ.

ಇದಾದ ಬಳಿಕ ಪುನೀತ್ ಪೊಲೀಸರಿಗೆ ಕರೆ ಮಾಡಿ, ತನ್ನ ಮನೆಯ ಹೊರಗೆ ಮಾಂಸದ ಚೀಲ ಪತ್ತೆಯಾಗಿದೆ ಎಂದು ದೂರು ನೀಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮಾವಿಮಿರಾ ಗ್ರಾಮದ ಹಿರಿಯ ಸಬ್‌ ಇನ್‌ಸ್ಪೆಕ್ಟರ್ ಅವರ ಪ್ರಕಾರ, ಪುನೀತ್ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿರುವುದು ದೃಢಪಟ್ಟಿದೆ. ಆದರೆ ಆತನಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.

‘ಇಂತಹ ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಉದ್ವಿಗ್ನತೆ ಅಥವಾ ಗೊಂದಲ ಸೃಷ್ಟಿಸಬಾರದು ಎಂದು ಪುನೀತ್‌ಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಮೀರತ್ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News