×
Ad

ಉದ್ಘಾಟನೆಗೊಂಡ ಮೂರು ತಿಂಗಳಲ್ಲೇ ದಿಲ್ಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ ವೇಯಲ್ಲಿ ಭಾರೀ ಗುಂಡಿಗಳು: ವಿಡಿಯೋ ವೈರಲ್

12,000 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದ ಪ್ರತಿಪಕ್ಷಗಳು

Update: 2026-07-02 18:25 IST

Photo Credit : X

ದಿಲ್ಲಿ: ಮೂರು ತಿಂಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ದಿಲ್ಲಿ-ಡೆಹ್ರಾಡೂನ್ ಎಕ್ಸ್ಪ್ರೆಸ್ ವೇಯಲ್ಲಿ ಎರಡು ಬೃಹತ್ ಗುಂಡಿಗಳು ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುಮಾರು ₹12,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಹೆದ್ದಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಪ್ರತಿಪಕ್ಷಗಳು ಭ್ರಷ್ಟಾಚಾರದ ಆರೋಪ ಹೊರಿಸಿವೆ.

ಶಾಮ್ಲಿ ಜಿಲ್ಲೆಯ ಹಾಥಿ ಕರೋಡಾ ಗ್ರಾಮದ ಸಮೀಪದ ಎಕ್ಸ್ಪ್ರೆಸ್ವೇಯಲ್ಲಿ ಕಂಡುಬಂದ ದೊಡ್ಡ ಗುಂಡಿಗಳ ವಿಡಿಯೋವನ್ನು ಒಬ್ಬ ವಾಹನ ಚಾಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಈ ಬೆಳವಣಿಗೆಗಳು ನಡೆದಿದೆ.

"ನನ್ನ ಕಣ್ಣೆದುರೇ ನಾಲ್ಕೈದು ವಾಹನಗಳು ಗುಂಡಿಗಳ ಕಾರಣದಿಂದ ನಿಯಂತ್ರಣ ಕಳೆದುಕೊಂಡವು. ಕನಿಷ್ಠ ಎರಡು ಕಾರುಗಳ ಅಲಾಯ್ ವೀಲ್ಗಳು ಗುಂಡಿಗೆ ಬಡಿದು ಹಾನಿಗೊಳಗಾದವು" ಎಂದು ವಿಡಿಯೋದಲ್ಲಿ ಹೇಳಿರುವ ವಾಹನ ಚಾಲಕ, ಬಳಿಕ ಹಾನಿಗೊಳಗಾದ ಅಲಾಯ್ ವೀಲ್ನ ದೃಶ್ಯವನ್ನೂ ವಿಡಿಯೋದಲ್ಲಿ ತೋರಿಸುವುದು ಕಂಡುಬರುತ್ತದೆ.

ಆರು ಪಥಗಳ ಈ ಎಕ್ಸ್ಪ್ರೆಸ್ವೇ ದಿಲ್ಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಆರು ಗಂಟೆಗಳಿಂದ ಕೇವಲ ಎರಡು ಗಂಟೆಗಳಿಗೆ ಇಳಿಸಿದೆ. ವಿಶೇಷವಾಗಿ ವಾರಾಂತ್ಯಗಳಲ್ಲಿ ಈ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ಕಂಡುಬರುತ್ತಿದೆ. 212 ಕಿಲೋಮೀಟರ್ ಉದ್ದದ ಈ ಎಕ್ಸ್ಪ್ರೆಸ್ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್ 14ರಂದು ಉದ್ಘಾಟಿಸಿದ್ದರು.

ವಿಡಿಯೋ ವೈರಲ್ ಆಗಿ ಸಾರ್ವಜನಿಕ ಆಕ್ರೋಶ ಹೆಚ್ಚಾದ ಬಳಿಕ, ಸಂಬಂಧಿಸಿದ ಅಧಿಕಾರಿಗಳು ಹಾನಿಗೊಳಗಾದ ರಸ್ತೆಯ ಭಾಗವನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದಾರೆ.

ಈ ಎಕ್ಸ್ಪ್ರೆಸ್ವೇ ಉದ್ಘಾಟನೆಯಾಗಿ ಕೇವಲ 79 ದಿನಗಳಲ್ಲೇ ಗುಂಡಿಗಳು ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಮತ್ತು ವ್ಯಂಗ್ಯಕ್ಕೆ ಕಾರಣವಾಗಿದೆ.

ಉದ್ಯಮಿ ಮನು ಅವರು ಎಕ್ಸ್ನಲ್ಲಿ ಪ್ರಧಾನಿ ಮೋದಿ ಅವರನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದು, "ಸುಮಾರು ಐದು ವರ್ಷ ತೆಗೆದುಕೊಂಡು ನಿರ್ಮಿಸಿದ ರಸ್ತೆ ಇದು. ಇನ್ನೂ ಮೊದಲ ಮಳೆಯನ್ನೂ ಎದುರಿಸಿಲ್ಲ. ಆದರೆ ಇದರ ಸ್ಥಿತಿ ನೋಡಿ" ಎಂದು ಟೀಕಿಸಿದ್ದಾರೆ.

ಮತ್ತೊಬ್ಬ ಎಕ್ಸ್ ಬಳಕೆದಾರ, "₹650 ಟೋಲ್ ಪಾವತಿಸಿ, ₹110 ಬೆಲೆಯ E20 ಪೆಟ್ರೋಲ್ ಖರೀದಿಸಿದರೂ ಜೀವಕ್ಕೆ ಯಾವುದೇ ಭರವಸೆ ಇಲ್ಲ" ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿವೆ.

ಕಳಪೆ ಗುಣಮಟ್ಟದ ಕಾಮಗಾರಿ ಮತ್ತು ಸಾರ್ವಜನಿಕ ಹಣದ ದುರುಪಯೋಗ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮೊಹಮ್ಮದ್ , "ಭ್ರಷ್ಟಾಚಾರಕ್ಕೆ ಇನ್ನೇನು ಸಾಕ್ಷಿ ಬೇಕು? ಪ್ರತಿಯೊಂದು ಇಲಾಖೆಯಲ್ಲೂ ಬಹಿರಂಗ ದರೋಡೆ ನಡೆಯುತ್ತಿದೆ" ಎಂದು ಎಕ್ಸ್ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷ ಕೂಡ ಈ ವಿಡಿಯೋವನ್ನು ಹಂಚಿಕೊಂಡು, "ದೆಹಲಿ-ಡೆಹ್ರಾಡೂನ್ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ₹12,000 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ಅಲ್ಪಾವಧಿಯಲ್ಲೇ ಮೋದಿ ಸರ್ಕಾರದ ಅಭಿವೃದ್ಧಿಯ ನಿಜ ಮುಖ ಬಹಿರಂಗವಾಗಿದೆ" ಎಂದು ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News