ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ: ಸೋಮವಾರ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ ಹೊರತಾಗಿಯೂ, ಹೂಡಿಕೆದಾರರು ಲಾಭವನ್ನು ನಗದೀಕರಿಸಿಕೊಳ್ಳಲು ಮುಂದಾದ ಕಾರಣ ತೀವ್ರ ಕುಸಿತವನ್ನು ಕಂಡವು.

ಕಳೆದ ವಾರಾಂತ್ಯದಲ್ಲಿ ಬಿಎಸ್ಇ ಪಟ್ಟಿಯಲ್ಲಿರುವ ಎಲ್ಲ 6,209 ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 515.33 ಲಕ್ಷ ಕೋಟಿ ರೂ.ಗಳಷ್ಟಿತ್ತು. ಸೋಮವಾರದ ವಹಿವಾಟಿನ ಅಂತ್ಯಕ್ಕೆ ಅದು 508.93 ಲಕ್ಷ ಕೋಟಿ ರೂ.ಗಳಿಗೆ ಕುಸಿದಿದೆ. ಅಂದರೆ ಒಂದೇ ದಿನದಲ್ಲಿ ಹೂಡಿಕೆದಾರರಿಗೆ ಸುಮಾರು 6.94 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದೆ!

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್ಐಐ) ದಾಖಲೆಯ ಒಳಹರಿವು, ಕಚ್ಚಾ ತೈಲ ಬೆಲೆ ಇಳಿಕೆ ಮತ್ತು ಜಾಗತಿಕ ಎಐ ವಹಿವಾಟಿನ ಕುಸಿತದಿಂದ ಕಳೆದ ನಾಲ್ಕು ವಾರಗಳಿಂದ ಕಂಡುಬಂದಿದ್ದ ಬಲವಾದ ಏರಿಕೆಯ ಹೊರತಾಗಿಯೂ, ಸೋಮವಾರ ಬೆಳಗ್ಗಿನ ಹೊತ್ತಿಗೆ ಮಾರುಕಟ್ಟೆಯ ಕಾವು ಕಡಿಮೆಯಾಗಿ ದಿನವಿಡೀ ಕುಸಿತ ಮುಂದುವರಿಯಿತು. ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಶುಕ್ರವಾರದ ಮುಕ್ತಾಯಕ್ಕಿಂತ 1,483 ಅಂಕಗಳಷ್ಟು ಕುಸಿದು 82,435.99 ಕ್ಕೆ ತಲುಪಿತು. ನಿಫ್ಟಿ 450 ಅಂಕಗಳಷ್ಟು ಕುಸಿದು 25,349.65 ತಲುಪುವ ಮೂಲಕ ಕಳೆದ ಎರಡು ತಿಂಗಳಲ್ಲೇ ಅತ್ಯಂತ ಕೆಟ್ಟ ವಹಿವಾಟಿನ ದಿನವನ್ನು ದಾಖಲಿಸಿತು.

30 ಷೇರುಗಳ ಬಿಎಸ್ಇ ಸೂಚ್ಯಂಕದಲ್ಲಿ ಟಾಟಾ ಸ್ಟೀಲ್ ಅತಿ ಹೆಚ್ಚು ನಷ್ಟ (ಶೇ.8.42) ಅನುಭವಿಸಿದರೆ, ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ನಂತರದ ಸ್ಥಾನಗಳಲ್ಲಿವೆ.

ಬೆಳಗ್ಗೆ ಎರಡೂ ಸೂಚ್ಯಂಕಗಳು ಉತ್ತಮ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ್ದವು. ಸೆನ್ಸೆಕ್ಸ್ ಶುಕ್ರವಾರದ ಮುಕ್ತಾಯಕ್ಕಿಂತ 502 ಅಂಕಗಳ ಏರಿಕೆಯೊಂದಿಗೆ 84,421.97 ರಲ್ಲಿ ಹಾಗೂ ನಿಫ್ಟಿ 128 ಅಂಕಗಳ ಏರಿಕೆಯೊಂದಿಗೆ 25,929.15 ರಲ್ಲಿ ಆರಂಭಗೊಂಡಿದ್ದವು.

ಹಣಕಾಸು ವಲಯದ ಷೇರುಗಳ ಮಾರಾಟ ಈ ಕುಸಿತಕ್ಕೆ ಪ್ರಮುಖ ಕಾರಣವಾಯಿತು. ಕಳೆದ ನಾಲ್ಕು ವಾರಗಳಲ್ಲಿ ಶೇ.19ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದ ಬ್ಯಾಂಕ್ ಷೇರುಗಳು ಶೇ.2ರಷ್ಟು ಕುಸಿದಿವೆ. ನವೆಂಬರ್ ತಿಂಗಳ ಬಲವಾದ ಏರಿಕೆಯ ನಂತರ ಈ ಇಳಿಕೆ ಕಂಡುಬಂದಿದೆ.

ಈ ತೀವ್ರ ಕುಸಿತದ ಹೊರತಾಗಿಯೂ, ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಗೆ ಪ್ರಮುಖ ಬೆಂಬಲವಾಗಿ ಉಳಿಯುವ ನಿರೀಕ್ಷೆಯಿದೆ. ವಿನಿಮಯ ಕೇಂದ್ರದ ಅಂಕಿಅಂಶಗಳ ಪ್ರಕಾರ, ಎಫ್ಐಐಗಳು ಈಗಾಗಲೇ ಶುಕ್ರವಾರ 10,308 ಕೋಟಿ ರೂ.ಮೌಲ್ಯದ ಷೇರುಗಳನ್ನು ಖರೀದಿಸಿದ್ದು, ನವೆಂಬರ್ ತಿಂಗಳಲ್ಲಿ ಅವುಗಳ ಒಟ್ಟು ಖರೀದಿಯು ದಾಖಲೆಯ 13 ಶತಕೋಟಿ ಡಾಲರ್‌ಗೆ ತಲುಪಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ನಂದಕುಮಾರ್ , ವಾರ್ತಾಭಾರತಿ

contributor