Uttar Pradesh | ಕಳ್ಳಭಟ್ಟಿ ಮದ್ಯ ಪೂರೈಸಲು ಮನೆಯ ಅಂಗಳದಲ್ಲೇ ಕೈಪಂಪ್ ವ್ಯವಸ್ಥೆ: ಮಹಿಳೆಯ ಬಂಧನ
ಝಾನ್ಸಿ: ಕಳ್ಳಭಟ್ಟಿ ಮದ್ಯವನ್ನು ಗ್ರಾಹಕರಿಗೆ ಪೂರೈಸಲು ಮನೆಯ ಅಂಗಳದಲ್ಲೇ ಕೈಪಂಪ್ ವ್ಯವಸ್ಥೆ ಮಾಡಿಕೊಂಡಿದ್ದ ಮಹಿಳೆಯೊಬ್ಬರನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಮಹಿಳೆಯನ್ನೂ ಬಂಧಿಸಲಾಗಿದೆ.
ಖಚಿತ ಸುಳಿವಿನ ಮೇರೆಗೆ ಅಬಕಾರಿ ಇಲಾಖೆ ಹಾಗೂ ಝಾನ್ಸಿ ಠಾಣೆಯ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದಾಗ, ಮನೆಯ ವರಾಂಡದಲ್ಲಿದ್ದ ಭೂಗತ ಸಂಗ್ರಹ ತೊಟ್ಟಿಯಿಂದ ಕಳ್ಳಭಟ್ಟಿ ಮದ್ಯ ಹೊರತೆಗೆಯಲು ಕೈಪಂಪ್ ಅಳವಡಿಸಿರುವುದು ಪತ್ತೆಯಾಗಿದೆ. ಕಾರ್ಯಾಚರಣೆಯಲ್ಲಿ 340 ಲೀಟರ್ ಕಳ್ಳಭಟ್ಟಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, 4,300 ಕೆ.ಜಿ. ಹುಳಿ ಬರಿಸುವ ಪದಾರ್ಥವನ್ನು ನಾಶಪಡಿಸಲಾಗಿದೆ.
ಬರೌರಾ ಕ್ರಾಸಿಂಗ್, ಸಿಮ್ರವಾರಿ ಹಿಲ್ಸ್, ಬೈದೋರಾ, ದಖ್ನೇಶ್ವರ್, ಡೇರಾ ಪೃಥ್ವಿಪುರ್ ನಾಯಖೇಡಾ, ಬುಧ್ ಪುರ, ಬಮ್ಹೌರೌಲಿ, ಸಕ್ರಾರ್ ಮತ್ತು ಅದ್ಜರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.
ಈ ವೇಳೆ ಅಬಕಾರಿ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಓರ್ವ ಮಹಿಳೆಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಮತ್ತೊಂದು ಪ್ರತ್ಯೇಕ ಜಂಟಿ ಕಾರ್ಯಾಚರಣೆಯಲ್ಲಿ 30 ಲೀಟರ್ ಕಳ್ಳಭಟ್ಟಿ ಮದ್ಯ ಹೊಂದಿದ್ದ ಮಹಿಳೆಯನ್ನು ಬಂಧಿಸಲಾಗಿದೆ. 1,000 ಲೀಟರ್ ಹುಳಿ ಬರಿಸುವ ಪದಾರ್ಥವನ್ನು ನಾಶಪಡಿಸಲಾಗಿದ್ದು, ಈ ಸಂಬಂಧ ಕಾನೂನು ಕ್ರಮ ಮುಂದುವರಿದಿದೆ.