NEET ಪ್ರಶ್ನೆ ಪತ್ರಿಕೆ ಸೋರಿಕೆ | ಇಂದು ಸಿಜೆಪಿ ನಿಯೋಗದ ಜೊತೆ ಕೇಂದ್ರ ಸರಕಾರ ಮಾತುಕತೆ
Photo | PTI
ಹೊಸ ದಿಲ್ಲಿ: ನೀಟ್ ಪರೀಕ್ಷಾ ಅಕ್ರಮದ ಕುರಿತು ಮಾತುಕತೆ ನಡೆಸಬೇಕು ಎಂಬ ಕಾಕ್ರೋಚ್ ಜನತಾ ಪಾರ್ಟಿಯ ಪ್ರಮುಖ ಆಗ್ರಹಕ್ಕೆ ಕೊನೆಗೂ ಕೇಂದ್ರ ಸರಕಾರ ಮಣಿದಿದೆ. ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕಾಕ್ರೋಚ್ ಜನತಾ ಪಾರ್ಟಿಯ ನಿಯೋಗ ಹಾಗೂ ಕೇಂದ್ರ ಸಚಿವರ ನಡುವೆ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಮಾತುಕತೆ ನಿಗದಿಯಾಗಿದೆ.
ಮೇದಾಂತ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಸಮ್ಮುಖದಲ್ಲಿ ಶಿಕ್ಷಣ ತಜ್ಞ ಹಾಗೂ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ಇದರ ಬೆನ್ನಿಗೆ ಈ ಸಭೆ ನಡೆಯಲಿದೆ.
ಈ ಬೆಳವಣಿಗೆಯನ್ನು ದೃಢಪಡಿಸಿರುವ ಕಾಕ್ರೋಚ್ ಜನತಾ ಪಾರ್ಟಿಯ ವಕ್ತಾರ ಸೌರವ್ ದಾಸ್, ಮಾತುಕತೆ ನಡೆಸುವ ಸರಕಾರದ ತೀರ್ಮಾನವನ್ನು ಸ್ವಾಗತಿಸಿದ್ದಾರೆ.
“ನಮ್ಮ ಪ್ರತಿಭಟನೆ ಮುಂದುವರಿಯಲಿದೆ. ಸಚಿವರೊಂದಿಗೆ ಮಾತುಕತೆ ನಡೆಸಲು ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮುಕ್ತ ಮಾತುಕತೆ ನಡೆಯುವ ಆಶಾಭಾವ ಹೊಂದಿದ್ದೇವೆ” ಎಂದು ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.