ರಾಜ್ಯಸಭೆಯಲ್ಲಿ ‘ವಂದೇ ಮಾತರಂ’ ಮಸೂದೆ ಮಂಡನೆ
ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಗಮನ ಬೇರೆಡೆ ಸೆಳೆಯುವ ಯತ್ನ ಎಂದು ವಿರೋಧ ಪಕ್ಷಗಳ ಆರೋಪ
ರಾಜ್ಯಸಭೆ |Photo Credit : PTI
ಹೊಸದಿಲ್ಲಿ: ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ–2026 ಅನ್ನು ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಿದರು. ವಂದೇ ಮಾತರಂ ಹಾಡುವ ವೇಳೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ಅಡಚಣೆ ಉಂಟುಮಾಡುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.
ಪ್ರಸ್ತಾವಿತ ಮಸೂದೆಯು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆ–1971ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದೆ. ಅದರಂತೆ, ವಂದೇ ಮಾತರಂ ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವ ಅಥವಾ ರಾಷ್ಟ್ರೀಯ ಗೀತೆ ಹಾಡುತ್ತಿರುವ ಸಭೆಗೆ ಅಡಚಣೆ ಉಂಟುಮಾಡುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಲು ಕಾಯ್ದೆಯ ನಿಬಂಧನೆಗಳನ್ನು ವಿಸ್ತರಿಸುವ ಪ್ರಸ್ತಾಪವನ್ನು ಒಳಗೊಂಡಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಿದ್ದು, ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದಲೇ ಸರಕಾರ ಈ ಮಸೂದೆಯನ್ನು ಮಂಡಿಸಿದೆ ಎಂದು ಅವು ಆರೋಪಿಸಿವೆ.
ಈ ಮಸೂದೆ ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷಗಳು ಹೇಳಿವೆ.