“ಇನ್ನು ಮುಂದೆ ಯಾವುದೇ ಚುನಾವಣೆಗಳನ್ನು ನಡೆಸುವುದಿಲ್ಲ” : ನಿಕರಾಗುವಾ ಅಧ್ಯಕ್ಷ ಡೇನಿಯಲ್ ಒರ್ಟೆಗಾ ಘೋಷಣೆ
Photo | X/@litnewsnet
ನಿಕರಾಗುವಾ : ದೇಶದಲ್ಲಿ ಇನ್ನು ಮುಂದೆ ಯಾವುದೇ ಚುನಾವಣೆಗಳನ್ನು ನಡೆಸುವುದಿಲ್ಲ ಎಂದು ನಿಕರಾಗುವಾ ಅಧ್ಯಕ್ಷ ಡೇನಿಯಲ್ ಒರ್ಟೆಗಾ ಘೋಷಿಸಿದ್ದಾರೆ.
ನಿಕರಾಗುವಾದಲ್ಲಿ ಸುದೀರ್ಘವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡೇನಿಯಲ್ ಒರ್ಟೆಗಾ, ವಿರೋಧ ಪಕ್ಷಗಳು ಅಧಿಕಾರಕ್ಕೆ ಬರುವುದನ್ನು ತಡೆಯಲು ದೇಶದಲ್ಲಿ ಯಾವುದೇ ಚುನಾವಣೆಗಳನ್ನು ನಡೆಸುವುದಿಲ್ಲ ಎಂದು ಹೇಳಿದ್ದಾರೆ.
1979ರ ಸ್ಯಾಂಡಿನಿಸ್ಟಾ ಕ್ರಾಂತಿಯ 47ನೇ ವಾರ್ಷಿಕೋತ್ಸವದ ಅಂಗವಾಗಿ ರವಿವಾರ ಹಮ್ಮಿಕೊಂಡ ಅಧಿಕೃತ ಸಮಾರಂಭದಲ್ಲಿ ಮಾತನಾಡಿದ ಡ್ಯಾನಿಯಲ್ ಒರ್ಟೆಗಾ ಈ ಘೋಷಣೆ ಮಾಡಿದರು. 80 ವರ್ಷದ ಸರ್ವಾಧಿಕಾರಿ ಒರ್ಟೆಗಾ ಅವರು 2007ರಿಂದ ನಿಕರಾಗುವಾದಲ್ಲಿ ಅಧಿಕಾರದಲ್ಲಿದ್ದಾರೆ. ತನ್ನ ನಿಯಂತ್ರಣದಲ್ಲಿರುವ ಸಂಸತ್ತಿನ ಸಹಕಾರದೊಂದಿಗೆ, ಪ್ರತಿಪಕ್ಷದ ವಿರುದ್ಧ ಗೋಡೆಯೊಂದನ್ನು ನಿರ್ಮಿಸುವಂತೆ ಕಾರ್ಯನಿರ್ವಹಿಸುವ ಹೊಸ ಕಾನೂನುಗಳನ್ನು ಜಾರಿಗೆ ತರುವುದಾಗಿ ಅವರು ಹೇಳಿದ್ದಾರೆ.
ಡ್ಯಾನಿಯಲ್ ಒರ್ಟೆಗಾ ಮತ್ತು ಅವರ ಪತ್ನಿ, ಸಹ-ಅಧ್ಯಕ್ಷೆ ರೊಸಾರಿಯೊ ಮುರಿಲ್ಲೊ ಅವರ ಆಡಳಿತದಲ್ಲಿ ಮಧ್ಯ ಅಮೆರಿಕದ ಈ ದೇಶದಲ್ಲಿ ಪ್ರಜಾಪ್ರಭುತ್ವವು ದುರ್ಬಲಗೊಂಡಿದೆ. ಒರ್ಟೆಗಾ ಅವರ ಇತ್ತೀಚಿನ ಈ ಘೋಷಣೆಯನ್ನು ಅನೇಕರು ಪ್ರಜಾಪ್ರಭುತ್ವ ವಿರೋಧಿ ನಿಲುವಿನ ಮತ್ತಷ್ಟು ತೀವ್ರವಾದ ಘೋಷಣೆ ಎಂದು ವಿಶ್ಲೇಷಿಸಲಾಗಿದೆ.
ಈ ನಿರ್ಧಾರದೊಂದಿಗೆ ಡ್ಯಾನಿಯಲ್ ಒರ್ಟೆಗಾ ಮತ್ತು ರೊಸಾರಿಯೊ ಮುರಿಲ್ಲೊ ಅವರು ನಿಕರಾಗುವಾವನ್ನು ಸಂಪೂರ್ಣ ಸರ್ವಾಧಿಕಾರಿ ಆಡಳಿತದತ್ತ ಕೊಂಡೊಯ್ದಿದ್ದಾರೆ ಎಂದು ಲ್ಯಾಟಿನ್ ಅಮೆರಿಕದ ಹಿರಿಯ ವಿಶ್ಲೇಷಕ ಟಿಜಿಯಾನೊ ಬ್ರೆಡಾ ಹೇಳಿದ್ದಾರೆ.
ಸಾವಿರಾರು ಸರಕಾರಿ ನೌಕರರ ಎದುರು ಭಾಷಣ ಮಾಡಿದ ಡ್ಯಾನಿಯಲ್ ಒರ್ಟೆಗಾ, ಇಲ್ಲಿ ಇನ್ನು ಮುಂದೆ ಯಾವುದೇ ಚುನಾವಣೆಗಳು ಇರುವುದಿಲ್ಲ. ಆದ್ದರಿಂದ ಅವರು(ವಿಪಕ್ಷಗಳು) ಅಧಿಕಾರವನ್ನು ಕಬಳಿಸಲು ಪ್ರಯತ್ನಿಸಬಹುದು ಎಂದು ಹೇಳಿದ್ದಾರೆ.
61 ದಿನಗಳ ಬಳಿಕ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಡ್ಯಾನಿಯಲ್ ಒರ್ಟೆಗಾ, ದಂಗೆ ರೂಪಿಸುವವರು ಹಾಗೂ ತಮ್ಮ ದೇಶವನ್ನು ಮಾರಟಮಾಡುವ ದೇಶದ್ರೋಹಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುವ ಕಾನೂನುಗಳ ಅಗತ್ಯವಿದೆ. ಅದಕ್ಕಾಗಿ ನಾವು ನ್ಯಾಷನಲ್ ಅಸೆಂಬ್ಲಿ ಮತ್ತು ಸಂಬಂಧಿತ ಸಂಸ್ಥೆಗಳೊಂದಿಗೆ ಸೇರಿ ಕಾನೂನುಗಳನ್ನು ರೂಪಿಸುತ್ತೇವೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಯುಎಸ್ ಸ್ಟೇಟ್ ಸೆಕ್ರೆಟರಿ ಮಾರ್ಕೊ ರೂಬಿಯೊ, "ಇನ್ನು ಮುಂದೆ ಚುನಾವಣೆಗಳನ್ನು ನಡೆಸದಿರುವ ಒರ್ಟೆಗಾ ಅವರ ನಿರ್ಧಾರವು ಅವರ ನಿಜವಾದ ಸರ್ವಾಧಿಕಾರಿ ಸ್ವಭಾವವನ್ನು ಬಹಿರಂಗಪಡಿಸುತ್ತದೆ. ನಿಕರಾಗುವಾ ಜನರು ಪ್ರಜಾಪ್ರಭುತ್ವದ ಚುನಾವಣೆಗಳ ಮೂಲಕ ತಮ್ಮದೇ ಆದ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ" ಎಂದು ಹೇಳಿದ್ದಾರೆ. ಟ್ರಂಪ್ ಆಡಳಿತವು ಒರ್ಟೆಗಾ ಅವರ ಆಡಳಿತವನ್ನು ಸರ್ವಾಧಿಕಾರದ ಸರಕಾರ ಎಂದು ಬಣ್ಣಿಸಿದೆ ಮತ್ತು 2,350ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಒರ್ಟೆಗಾ ಅವರ ಸಂಬಂಧಿಕರ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.