ಗದ್ದಲದೊಂದಿಗೆ ಆರಂಭವಾದ ಸಂಸತ್ ಅಧಿವೇಶನ: ಕೆಲವೇ ನಿಮಿಷಗಳಲ್ಲಿ ಮುಂದೂಡಿಕೆ
ಸಾಂದರ್ಭಿಕ ಚಿತ್ರ Photo credit: Screenshot from YouTube/@SansadTV
ಹೊಸದಿಲ್ಲಿ : ಬಹುನಿರೀಕ್ಷಿತ ಮಸೂದೆಗಳ ಮಂಡನೆ ಮತ್ತು ನೀಟ್ ವಿಚಾರದಲ್ಲಿ ಸಿಜೆಪಿ ಚಲೋ ಸಂಸದ್ ಪ್ರತಿಭಟನೆಗಳ ನಡುವೆ ಸಂಸತ್ತಿನ ಅಧಿವೇಶನವು ಆರಂಭವಾಗಿದೆ. ಆದರೆ ವಿರೋಧ ಪಕ್ಷದ ಸಂಸದರ ಘೋಷಣೆಗಳ ಗದ್ದಲದೊಂದಿಗೆ ಕೆಲವೇ ನಿಮಿಷಗಳಲ್ಲಿ ಎರಡನೇ ಬಾರಿಗೆ ಸದನ ಮುಂದೂಡಿಕೆಯಾಗಿದೆ.
ಅಧಿವೇಶನದ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಸಕ್ತ ಸಾಲಿನ ಮುಂಗಾರು ಮಳೆಯಂತೆ ಸಂಸತ್ತಿನ ಈ ಅಧಿವೇಶನವೂ ಸಹ ಉತ್ಪಾದಕ ಮತ್ತು ಫಲಪ್ರದವಾಗಲಿದೆ ಎಂದು ತಿಳಿಸಿದರು. ಎಲ್ಲಾ ಸಂಸದರು ಸದನದ ಕಲಾಪಗಳಲ್ಲಿ ಪೂರ್ಣ ಹೃದಯದಿಂದ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಬಳಿಕ ವಿರೋಧ ಪಕ್ಷದ ಸಂಸದರ ಘೋಷಣೆಗಳ ಗದ್ದಲದೊಂದಿಗೆ ಆರಂಭವಾದ ಲೋಕಸಭೆ ಅಧಿವೇಶನವನ್ನ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ವಿದ್ಯಾರ್ಥಿಗಳ ಪ್ರತಿಭಟನೆಯ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ರಾಜ್ಯಸಭೆಯನ್ನೂ ಸಹ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.