ಫುಕೆಟ್–ದಿಲ್ಲಿ ವಿಮಾನ ಹಾರಾಟದ ವೇಳೆ ಗಾಂಜಾ ಸೇವಿಸಿದ್ದ ಪೈಲಟ್!

ಎರಡು ಡೋಪಿಂಗ್ ಪರೀಕ್ಷೆಯಲ್ಲೂ ವಿಫಲ; ಒಮ್ಮೆಲೇ 300 ಅಡಿ ಕುಸಿದಿದ್ದ ವಿಮಾನ

Update: 2026-08-11 21:59 IST

Photo Credit : X 

ಹೊಸದಿಲ್ಲಿ: ಫುಕೆಟ್ನಿಂದ ದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ದಿಢೀರನೆ ಸುಮಾರು 300 ಅಡಿ ಕೆಳಕ್ಕೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಎರಡು ಡೋಪಿಂಗ್ ಪರೀಕ್ಷೆಗಳಲ್ಲೂ ವಿಮಾನದ ಪೈಲಟ್ ಇನ್ ಕಮಾಂಡ್ ವಿಫಲರಾಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ NDTV ವರದಿ ಮಾಡಿದೆ.

ಆಗಸ್ಟ್ 4ರಂದು 137 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿಯನ್ನು ಹೊತ್ತು ಫುಕೆಟ್ ನಿಂದ ದಿಲ್ಲಿಗೆ ಬರುತ್ತಿದ್ದ AI–2379 ವಿಮಾನ ವಾಯು ಪ್ರಕ್ಷುಬ್ಧತೆಗೆ ಸಿಲುಕಿತ್ತು. ಈ ವೇಳೆ ವಿಮಾನ ದಿಢೀರನೆ ಸುಮಾರು 300 ಅಡಿ ಕೆಳಕ್ಕೆ ಕುಸಿದಿತ್ತು. ಘಟನೆಯಲ್ಲಿ ಕನಿಷ್ಠ 20 ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ಗಾಯಗೊಂಡಿದ್ದರು.

ಗಾಯಗೊಂಡ ಇಬ್ಬರು ವಿಮಾನ ಸಿಬ್ಬಂದಿಯ ಪೈಕಿ ಒಬ್ಬರಿಗೆ ಬೆನ್ನುಮೂಳೆಗೆ ಹಾಗೂ ಮತ್ತೊಬ್ಬರಿಗೆ ಕುತ್ತಿಗೆ ಭಾಗದಲ್ಲಿ ಗಾಯವಾಗಿತ್ತು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಹಾರಾಟದ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಪೈಲಟ್ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ. ಕೆಲ ಸಮಯದ ಬಳಿಕ ಮತ್ತೊಂದು ಪರೀಕ್ಷೆ ನಡೆಸಲಾಗಿದ್ದು, ಅದರಲ್ಲೂ ಫಲಿತಾಂಶ ಧನಾತ್ಮಕವಾಗಿ ಬಂದಿದೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಗಾಂಜಾ ಎಂದು ಕರೆಯಲಾಗುವ ಮರಿಜುವಾನಾವನ್ನು ಪೈಲಟ್ ಸೇವಿಸಿದ್ದನು ಎಂಬುದು ಪರೀಕ್ಷೆಯಲ್ಲಿ ನಿರ್ದಿಷ್ಟವಾಗಿ ದೃಢಪಟ್ಟಿದೆ ಎಂದು ವರದಿಯಾಗಿದೆ.

ಘಟನೆಯ ಮರುಸೃಷ್ಟಿಯ ಆಧಾರದ ಮೇಲೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಏರ್ಬಸ್ A320 ನಿಯೋ ವಿಮಾನ ಸುಮಾರು 300 ಅಡಿ ಕೆಳಕ್ಕೆ ಕುಸಿದಾಗ ಪೈಲಟ್ ಮತ್ತು ಸಹ ಪೈಲಟ್ ಇನ್ ಕಮಾಂಡ್ ಇಬ್ಬರೂ ತಮ್ಮ ಆಸನಗಳಲ್ಲಿದ್ದರು. ಪೈಲಟ್ ನ ಕ್ರಮ, ತಾಂತ್ರಿಕ ವೈಫಲ್ಯ ಅಥವಾ ಹೈಡ್ರಾಲಿಕ್ ದೋಷದಿಂದ ವಿಮಾನ ಕೆಳಕ್ಕೆ ಕುಸಿದಿರಬಹುದು ಎನ್ನಲಾಗಿದೆ. ಈ ವೇಳೆ ವಿಮಾನ ‘ನೆಗೆಟಿವ್–ಜಿ’ ಸನ್ನಿವೇಶಕ್ಕೆ ತಲುಪಿತ್ತು ಎಂದು ತಿಳಿದುಬಂದಿದೆ.

ವಿಮಾನ ಕೆಳಕ್ಕೆ ಕುಸಿದ ಬೆನ್ನಿಗೇ ಪೈಲಟ್ ಅದನ್ನು ಮತ್ತೆ ಮೇಲಕ್ಕೆ ಹಾರಿಸಿದ್ದರು. ಈ ಸಂದರ್ಭದಲ್ಲಿ ಹಲವು ಪ್ರಯಾಣಿಕರು ಸುರಕ್ಷತಾ ಬೆಲ್ಟ್ಗಳನ್ನು ತಮ್ಮ ಆಸನಗಳಿಗೆ ಸರಿಯಾಗಿ ಕಟ್ಟಿಕೊಂಡಿರಲಿಲ್ಲ ಎನ್ನಲಾಗಿದೆ. ಇದರಿಂದ ವಿಮಾನ ಮೇಲಕ್ಕೆ ಹಾರಿದಾಗ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡರು ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೈಲಟ್ ಮತ್ತು ಸಹ ಪೈಲಟ್ ಇಬ್ಬರನ್ನೂ ವಿಚಾರಣೆ ಪೂರ್ಣಗೊಳ್ಳುವವರೆಗೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಈ ಕುರಿತು ಮಂಗಳವಾರ ಪ್ರಕಟಣೆ ಹೊರಡಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ಘಟನೆಯ ತನಿಖೆಯನ್ನು ವಿಮಾನ ಅಪಘಾತ ತನಿಖಾ ದಳ ಆರಂಭಿಸಿದೆ ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News