ಸ್ವಾತಂತ್ರ್ಯ ದಿನವನ್ನು ಗೌರವ, ಹೆಮ್ಮೆಯಿಂದ ಆಚರಿಸಿ: ಇನ್ಸ್ಟಾಗ್ರಾಮ್ ನಲ್ಲಿ ಹೊಸ ವೀಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ನರೇಂದ್ರ ಮೋದಿ | Photo Credit : Instagram, PTI
ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆಯನ್ನು ಗೌರವ, ಹೆಮ್ಮೆ ಹಾಗೂ ಅದ್ದೂರಿಯಿಂದ ಆಚರಿಸುವಂತೆ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಪಣ ತೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶದ ಜನತೆಗೆ ಕರೆ ನೀಡಿದರು.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ಆಡಳಿತಾರೂಢ NDA ಮೈತ್ರಿಕೂಟದ ಸಾಪ್ತಾಹಿಕ ‘ಮಂಗಳ್ ಮಿಲನ್’ ಸಭೆಗೆ ತಾವು ಆಗಮಿಸಿದ ಸಂದರ್ಭದಲ್ಲಿ NDA ಸಂಸದರು ಹಾಗೂ ಕೇಂದ್ರ ಸಚಿವರು ತ್ರಿವರ್ಣ ಧ್ವಜಗಳನ್ನು ಬೀಸುತ್ತಾ, ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
‘ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸೋಣ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಪಣ ತೊಡೋಣ. ಎಲ್ಲ ಮನೆಯೂ ತ್ರಿವರ್ಣ, ಮನೆ ಮನೆಯೂ ತ್ರಿವರ್ಣ, ಪ್ರತಿ ಮನಸೂ ತ್ರಿವರ್ಣ. ಬನ್ನಿ, ಪ್ರತಿ ಮನೆಯ ಬಳಿಯೂ ತ್ರಿವರ್ಣ ಧ್ವಜ ಹಾರಿಸೋಣ. ಭಾರತ್ ಮಾತಾ ಕಿ ಜೈ, ವಂದೇ ಮಾತರಂ, ವಂದೇ ಮಾತರಂ, ವಂದೇ ಮಾತರಂ’ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಕರೆ ನೀಡಿದ್ದಾರೆ.
ಇದಕ್ಕೂ ಮುನ್ನ ಸಂಸತ್ ಭವನ ಸಂಕೀರ್ಣದ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ನಡೆದ NDA ಸಂಸದೀಯ ಪಕ್ಷದ ಸಭೆಯ ಸ್ಥಳಕ್ಕೆ ಮೋದಿ ಆಗಮಿಸುತ್ತಿದ್ದಂತೆಯೇ, ಕೇಂದ್ರ ಸಚಿವರು ಹಾಗೂ ಸಂಸದರು ತ್ರಿವರ್ಣ ಧ್ವಜಗಳನ್ನು ಬೀಸುತ್ತಾ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿ ಅವರನ್ನು ಸ್ವಾಗತಿಸಿದರು.
ರಾಷ್ಟ್ರಧ್ವಜ ಹಿಡಿದುಕೊಂಡಿದ್ದ ಪ್ರಧಾನಿ ಮೋದಿ ಅವರೂ ಸಭಾಂಗಣದಲ್ಲಿ ಹಾಜರಿದ್ದ ಸದಸ್ಯರತ್ತ ಧ್ವಜವನ್ನು ಬೀಸಿ ಪ್ರತಿಕ್ರಿಯಿಸಿದರು.
ಸಭೆಯಲ್ಲಿ BJP ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಶಿವರಾಜ್ ಚೌಹಾಣ್ ಹಾಗೂ ಎಸ್. ಜೈಶಂಕರ್ ಉಪಸ್ಥಿತರಿದ್ದರು.
ಅವರೊಂದಿಗೆ NDA ಮಿತ್ರಪಕ್ಷಗಳ ಸಚಿವರಾದ ಎಚ್.ಡಿ. ಕುಮಾರಸ್ವಾಮಿ (JDS), ಕಿಂಜರಾಪು ರಾಮ್ ಮೋಹನ್ ನಾಯ್ಡು (TDP), ರಾಮದಾಸ್ ಬಂದು ಅಠಾವಳೆ (RPI-A) ಹಾಗೂ NCP ನಾಯಕ ಪ್ರಫುಲ್ ಪಟೇಲ್, RLM ನಾಯಕ ಉಪೇಂದ್ರ ಕುಶ್ವಾಹ, NCP ನಾಯಕ ಸತಾಬ್ದಿ ರಾಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.