‘ನೀವು ಯಾವಾಗಲೂ ನನ್ನ ಮೇಲೆ ಒತ್ತಡ ಹೇರುತ್ತೀರಿ’ : ಮಲ್ಲಿಕಾರ್ಜುನ ಖರ್ಗೆಗೆ ರಾಜ್ಯಸಭಾ ಸಭಾಪತಿ ರಾಧಾಕೃಷ್ಣನ್
ಸಿ.ಪಿ. ರಾಧಾಕೃಷ್ಣನ್ , ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ: ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾವಾಗಲೂ ತನ್ನ ಮೇಲೆ ಒತ್ತಡ ಹೇರುತ್ತಾರೆ ಎಂದು ರಾಜ್ಯ ಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮಂಗಳವಾರ ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಆರೋಪದ ವಿಷಯವನ್ನು ಪ್ರಸ್ತಾಪಿಸುವ ಮಲ್ಲಿಕಾರ್ಜನ ಖರ್ಗೆ ಅವರ ಬೇಡಿಕೆಯನ್ನು ರಾಧಾಕೃಷ್ಣನ್ ತಳ್ಳಿ ಹಾಕಿದ್ದಾರೆ.
ಮುಂದೂಡಲಾದ ಸದನ ಮಧ್ಯಾಹ್ನ 12 ಗಂಟೆಗೆ ಮತ್ತೆ ಸಮಾವೇಶಗೊಂಡು ಸಭಾಪತಿಗಳು ಪ್ರಶ್ನೋತ್ತರ ವೇಳೆಯನ್ನು ಆರಂಭಿಸಿದಾಗ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಅವರು, ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಆರೋಪದ ಕುರಿತು ಪ್ರಸ್ತಾವಿಸಲು ಎದ್ದು ನಿಂತರು. ಇದನ್ನು ನಿರಾಕರಿಸಿದ ಸಭಾಪತಿಗಳು, ‘‘ಪ್ರತಿಪಕ್ಷದ ನಾಯಕರು ರಾಜ್ಯದ ವಿಷಯವನ್ನು ಪ್ರಸ್ತಾpಸುತ್ತಿದ್ದಾರೆ. ಅದನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಜಾರ್ಖಂಡ್ ವಿಷಯ ರಾಜ್ಯದ ವಿಷಯವಾಗಿರುವುದರಿಂದ ಅದನ್ನು ಪ್ರಸ್ತಾವಿಸಲು ತಾನು ಆಡಳಿತ ಪಕ್ಷಕ್ಕೂ ಅವಕಾಶ ನೀಡಿಲ್ಲ’’ಎಂದು ಹೇಳಿದರು.
ಪ್ರತಿಪಕ್ಷ ಪ್ರತಿ ದಿನ ಒಂದೇ ವಿಷಯವನ್ನು ಎತ್ತಿ ಸದನಕ್ಕೆ ಅಡ್ಡಿಪಡಿಸುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಭಾಪತಿ ಹೇಳಿದರು.
ಅನಂತರ ಸಭಾಪತಿಗಳು ಪ್ರತಿಪಕ್ಷದ ನಾಯಕರಿಗೆ ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿ, ನಿಗದಿತ ಕಲಾಪವನ್ನು ಮುಂದುವರಿಸಲು ಯತ್ನಿಸಿದರು.
‘‘ದಯವಿಟ್ಟು, ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ ಖರ್ಗೆ ಜಿ... ನಾನು ನಿಮ್ಮಿಂದ (ಖರ್ಗೆ) ಒತ್ತಡಕ್ಕೆ ಒಳಗಾಗಿದ್ದೇನೆ. ಅವರು (ಆಡಳಿತ ಪಕ್ಷ) ಎಂದೂ ನನ್ನ ಮೇಲೆ ಒತ್ತಡ ಹೇರುವುದಿಲ್ಲ. ನೀವು ಯಾವಾಗಲೂ ನನ್ನ ಮೇಲೆ ಒತ್ತಡ ಹೇರುತ್ತೀರಿ’’ ಎಂದು ರಾಧಾಕೃಷ್ಣನ್ ಹೇಳಿದರು.