West Bengal | ಕೊಲ್ಕತ್ತಾದ ಹೋಟೆಲ್ ನಲ್ಲಿ ಭಾರಿ ಅಗ್ನಿ ದುರಂತ : 9 ಮಂದಿ ಬಾಂಗ್ಲಾ ಪ್ರಜೆಗಳು ಮೃತ್ಯು , ಆರು ಮಂದಿಗೆ ಗಾಯ
ಕೊಲ್ಕತ್ತಾ : ಹೋಟೆಲೊಂದರಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ ಕೊಲ್ಕತ್ತಾದಲ್ಲಿ ನಡೆದಿದೆ. ಮೃತಪಟ್ಟವರೆಲ್ಲರೂ ವೈದ್ಯಕೀಯ ಚಿಕಿತ್ಸೆಗಾಗಿ ಕೊಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶದ ಪ್ರಜೆಗಳಾಗಿದ್ದಾರೆ ಎಂದು ANI ವರದಿ ಮಾಡಿದೆ.
ಕೊಲ್ಕತ್ತಾದ ಮಿರ್ಜಾ ಗಾಲಿಬ್ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಮುಂಜಾನೆ 2 ಗಂಟೆಗೆ ಈ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
“ಘಟನೆಯಲ್ಲಿ ಗಾಯಗೊಂಡ ಆರು ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಮತ್ತು ಸಾವಿನ ಹಿಂದಿನ ಸಂದರ್ಭಗಳ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಟ್ಟವಾದ ಹೊಗೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿಗೆ ಮೆಟ್ಟಿಲುಗಳನ್ನೇರಿ ಮೇಲಿನ ಮಹಡಿಗಳನ್ನು ತಲುಪುವುದು ಕಷ್ಟಕರವಾಗಿದೆ. ಒಂಬತ್ತು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, “ಸಿಲುಕಿರುವವರನ್ನು ರಕ್ಷಿಸುವುದು ಮತ್ತು ಬೆಂಕಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚುವುದು ನಮ್ಮ ಮೊದಲ ಆದ್ಯತೆಯಾಗಿದೆ. ಬೆಂಕಿಯನ್ನು ನಂದಿಸಲಾಗಿದ್ದು, ಕೂಲಿಂಗ್ ಪ್ರಕ್ರಿಯೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಅಗ್ನಿಶಾಮಕ ಇಲಾಖೆಯ ಮುಖ್ಯ ಕಚೇರಿಯು ಈ ಹೋಟೆಲ್ ಕಟ್ಟಡದ ಸಮೀಪದಲ್ಲೇ ಇದೆ.