SIR: ಚುನಾವಣಾ ಆಯುಕ್ತರ ಕಳವಳವನ್ನೇ ಪ್ರತಿಧ್ವನಿಸಿದ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿ ಪತ್ರ; ವರದಿ
ʼಸ್ಥಳೀಯ ಚುನಾವಣಾಧಿಕಾರಿಗಳಿಗೆ ಹೆಚ್ಚಿನ ವಿವೇಚನಾ ಅಧಿಕಾರ ನೀಡುವಂತೆ ಒತ್ತಾಯʼ
Photo: EC and Maharashtra CEO websites
ಮುಂಬೈ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚುನಾವಣಾ ಆಯೋಗದ (EC) ಆಂತರಿಕ ಭಿನ್ನಾಭಿಪ್ರಾಯದ ಚರ್ಚೆ ಮುಂದುವರಿದಿರುವ ನಡುವೆಯೇ, ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ (CEO) ಎಸ್. ಚೊಕ್ಕಲಿಂಗಂ ಅವರು ಚುನಾವಣಾ ಆಯೋಗದ ECINet ಸಾಫ್ಟ್‌ವೇರ್ ಬಳಸುವ ಸ್ಥಳೀಯ ಚುನಾವಣಾಧಿಕಾರಿಗಳಿಗೆ ಹೆಚ್ಚಿನ ವಿವೇಚನಾ ಅಧಿಕಾರ ನೀಡುವಂತೆ ಒತ್ತಾಯಿಸಿರುವುದಾಗಿ ವರದಿಯಾಗಿದೆ.
ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಈ ಹಿಂದೆ ವ್ಯಕ್ತಪಡಿಸಿದ್ದ ಕಳವಳಗಳನ್ನೇ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಯ ಬೇಡಿಕೆಗಳು ಪ್ರತಿಧ್ವನಿಸುತ್ತವೆ ಎಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ. ಕಾನೂನಿನ ಪ್ರಕಾರ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ERO) ಇರುವ ಅಧಿಕಾರಗಳನ್ನು ಸಾಫ್ಟ್‌ವೇರ್ ನಿರ್ಬಂಧಿಸುತ್ತಿದೆ ಎಂಬುದು ಚೊಕ್ಕಲಿಂಗಂ ಅವರ ಕಳವಳವಾಗಿತ್ತು.
ECINet ಎಂಬುದು ಮತದಾರರ ಪಟ್ಟಿಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಚುನಾವಣಾ ಆಯೋಗ ಬಳಸುವ ಕೇಂದ್ರೀಕೃತ ಡಿಜಿಟಲ್ ವೇದಿಕೆಯಾಗಿದೆ.
ಸೆಪ್ಟೆಂಬರ್ 24ರಂದು ಹಿರಿಯ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಚೊಕ್ಕಲಿಂಗಂ ಅವರು ECINetನಲ್ಲಿ ಐದು ಬದಲಾವಣೆಗಳನ್ನು ಮಾಡುವಂತೆ ಕೋರಿದ್ದರು. ಈ ಪ್ರತಿಯೊಂದು ಬೇಡಿಕೆಯೂ ಚುನಾವಣಾ ಕಾನೂನಿನಡಿ ಈಗಾಗಲೇ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (EROs) ಇರುವ ಅಧಿಕಾರಗಳನ್ನು ಚಲಾಯಿಸಲು ಅವಕಾಶ ನೀಡುವ ಉದ್ದೇಶ ಹೊಂದಿತ್ತು.
ನಂತರ ಚುನಾವಣಾ ಆಯೋಗವು ಈ ಕೆಲವು ಸಮಸ್ಯೆಗಳನ್ನು ಭಾಗಶಃ ಪರಿಹರಿಸಿದ್ದು, “ತಾರ್ಕಿಕ ವ್ಯತ್ಯಾಸಗಳು” (logical discrepancies) ಎಂದು ಗುರುತಿಸಲಾದ ಪ್ರಕರಣಗಳಲ್ಲಿ ಸಂಬಂಧಪಟ್ಟ ಮತದಾರರು ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಬೇಕಾಗಿಲ್ಲ ಎಂದು ಆಯೋಗ ನಿರ್ಧರಿಸಿ, ಬೂತ್ ಮಟ್ಟದ ಅಧಿಕಾರಿಗಳು (BLOs) ಮತದಾರರ ಮನೆಗಳಿಂದ ದಾಖಲೆಗಳನ್ನು ಸಂಗ್ರಹಿಸಿ ಅವುಗಳನ್ನು ECINetನಲ್ಲಿ ಅಪ್‌ಲೋಡ್ ಮಾಡಬಹುದು ಎಂದು ಕೂಡ ತಿಳಿಸಿತು.
ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಯ ಒತ್ತಾಯವೇನು?
ಮಾನ್ಯ ಮತ್ತು ತೃಪ್ತಿಕರ ದಾಖಲೆಗಳನ್ನು ಸಲ್ಲಿಸಿರುವ ಮತದಾರರನ್ನು ವೈಯಕ್ತಿಕ ವಿಚಾರಣೆಯಿಂದ ವಿನಾಯಿತಿ ನೀಡಲು EROಗಳಿಗೆ ಅವಕಾಶ ಕಲ್ಪಿಸುವ ಆಯ್ಕೆಯನ್ನು ಒದಗಿಸಬೇಕು ಎಂಬುದು ಚೊಕ್ಕಲಿಂಗಂ ಅವರ ಬೇಡಿಕೆಗಳಲ್ಲಿ ಒಂದಾಗಿತ್ತು.
EROಗಳು ಉಪವಿಭಾಗ ಮಟ್ಟದ ಅಧಿಕಾರಿಗಳಾಗಿದ್ದು, ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವುದು, ಸೇರ್ಪಡೆಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸುವುದು ಹಾಗೂ ಹೆಸರು ಸೇರ್ಪಡೆ ಅಥವಾ ತೆಗೆದುಹಾಕುವ ಕುರಿತು ನಿರ್ಧರಿಸುವ ಜವಾಬ್ದಾರಿ ಹೊಂದಿರುತ್ತಾರೆ.
ಎಸ್‌ಐಆರ್ ನೋಟಿಸ್‌ಗಳಲ್ಲಿ ಪಟ್ಟಿ ಮಾಡಿರುವ 13 ದಾಖಲೆಗಳ ಹೊರತಾಗಿ ಇತರ ದಾಖಲೆಗಳನ್ನೂ ಮತದಾರರು ಸಲ್ಲಿಸಲು ಅವಕಾಶ ನೀಡುವ ಹೆಚ್ಚುವರಿ ಆಯ್ಕೆಯನ್ನು ಒದಗಿಸುವಂತೆ ಅವರು ಕೋರಿದ್ದರು. ಬುಡಕಟ್ಟು ಸಮುದಾಯಗಳು, ನಿರಾಶ್ರಿತರು ಮತ್ತು ಲೈಂಗಿಕ ಕಾರ್ಮಿಕ ಸಮುದಾಯಗಳ ಜನರಿಗೆ ಸೂಚನಾ ಪಟ್ಟಿಯಲ್ಲಿರುವ ದಾಖಲೆಗಳು ಇಲ್ಲದಿರಬಹುದು ಎಂದು ಅವರು ಗಮನಸೆಳೆದಿದ್ದರು ಎಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ. ಉದಾಹರಣೆಗೆ, ಪೋಷಕರ ಹೆಸರು ಹೊಂದಿಕೆಯಾಗದಿರುವುದು, ವಯಸ್ಸಿನ ವ್ಯತ್ಯಾಸ, ದಾಖಲೆಗಳ ಕೊರತೆ ಮುಂತಾದ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಸೀಮಿತವಾಗುತ್ತಿದೆ ಎಂಬುದು ಚೊಕ್ಕಲಿಂಗಂಅವರ ಪತ್ರದ ಪ್ರಮುಖ ಅಂಶ.
EROಗಳಿಗೆ ತೃಪ್ತಿಕರ ಸಾಕ್ಷ್ಯಗಳು ಲಭ್ಯವಿದ್ದರೆ, ಕೆಲವು ತಾರ್ಕಿಕ ವ್ಯತ್ಯಾಸ ಪ್ರಕರಣಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಳುಹಿಸುವ ಬದಲು ಅವರೇ ವಿಲೇವಾರಿ ಮಾಡಲು ಅವಕಾಶ ನೀಡಬೇಕು ಎಂದೂ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಕೋರಿದ್ದರು.
“ತಾರ್ಕಿಕ ವ್ಯತ್ಯಾಸ” ಎಂದರೆ ವ್ಯವಸ್ಥೆ ಗುರುತಿಸಿದ ಮಾಹಿತಿಯಲ್ಲಿನ ಹೊಂದಾಣಿಕೆಯ ಕೊರತೆಯಾಗಿದ್ದು, ಅಂತಹ ವ್ಯತ್ಯಾಸ ಕಂಡುಬಂದಿದೆ ಎಂಬ ಕಾರಣಕ್ಕೆ ಮಾತ್ರ ವ್ಯಕ್ತಿಯು ಮತದಾನಕ್ಕೆ ಅನರ್ಹ ಎಂದು ಅರ್ಥವಲ್ಲ.
ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ಪ್ರಕಾರ, ಇಂತಹ ವ್ಯತ್ಯಾಸಗಳು ಹಿಂದಿನ ಎಸ್‌ಐಆರ್‌ನ ಮತದಾರರ ಪಟ್ಟಿಯಲ್ಲಿ ಒಬ್ಬ ಮತದಾರನನ್ನು ಆತನ ತಂದೆ ಅಥವಾ ಅಜ್ಜ-ಅಜ್ಜಿಯೊಂದಿಗೆ ECINetಗೆ ಹೊಂದಿಸಲು ಸಾಧ್ಯವಾಗದಿದ್ದಾಗ ಉಂಟಾಗುತ್ತವೆ. ಉದಾಹರಣೆಗೆ, ತಂದೆಯ ಹೆಸರಿನಲ್ಲಿ ಅಥವಾ ವಯಸ್ಸಿನಲ್ಲಿ ಹೊಂದಾಣಿಕೆ ಇಲ್ಲದಿರುವುದು ಇದಕ್ಕೆ ಕಾರಣವಾಗಬಹುದು.
ಇಂತಹ ವ್ಯತ್ಯಾಸ ಪ್ರಕರಣಗಳಲ್ಲಿ “ಹಿಂದಿನ ಎಸ್‌ಐಆರ್‌ನ ಸಾರಾಂಶ” (Extract of Last SIR) ಅನ್ನು ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸದೆ ಐಚ್ಛಿಕಗೊಳಿಸಬೇಕು ಎಂದೂ ಚೊಕ್ಕಲಿಂಗಂ ಒತ್ತಾಯಿಸಿದ್ದರು. ಏಕೆಂದರೆ ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಯನ್ನು ಬಳಸಿಕೊಂಡು ವ್ಯವಸ್ಥೆಯೇ ಈಗಾಗಲೇ ವ್ಯತ್ಯಾಸವನ್ನು ಗುರುತಿಸಿದೆ ಎಂಬುದು ಅವರ ವಾದವಾಗಿತ್ತು ಎಂದು ವರದಿ ತಿಳಿಸಿದೆ.
ಇದಲ್ಲದೆ, EROಗಳಿಗೆ ಪದೇಪದೇ ಪ್ರಶ್ನೆಗಳು ಎದುರಾಗುತ್ತಿವೆ ಎಂದು ಹೇಳಿದ ಮುಖ್ಯ ಚುನಾವಣಾಧಿಕಾರಿ, ಅವರಿಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQಗಳು) ಮತ್ತು ಲಿಖಿತ ಸೂಚನೆಗಳನ್ನು ನೀಡಬೇಕು ಎಂದು ಕೋರಿದ್ದರು. ಆಯೋಗ ಅಥವಾ ಮುಖ್ಯ ಚುನಾವಣಾಧಿಕಾರಿಯಿಂದ ನೀಡುವ ಮೌಖಿಕ ಸೂಚನೆಗಳು ಸಾಕಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ನೋಟಿಸ್‌ಗಳು, ದಾಖಲೆಗಳ ಸಲ್ಲಿಕೆ, ವಿಚಾರಣೆ ಮತ್ತು ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ FAQಗಳಲ್ಲಿ ಸ್ಪಷ್ಟ ಸೂಚನೆಗಳನ್ನು ನೀಡಬೇಕು ಎಂದು ಅವರು ಕೇಳಿದ್ದರು ಎಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ.
ಮಹಾರಾಷ್ಟ್ರದಲ್ಲಿ ಸದ್ಯ ಎಸ್‌ಐಆರ್‌ನ ನೋಟಿಸ್ ಹಂತ ನಡೆಯುತ್ತಿದೆ. ಆಗಸ್ಟ್ 31ರಂದು ಪ್ರಕಟಿಸಲಾದ ರಾಜ್ಯದ ಕರಡು ಮತದಾರರ ಪಟ್ಟಿಯಲ್ಲಿ ಹಿಂದಿನ ಪಟ್ಟಿಗೆ ಹೋಲಿಸಿದರೆ ಮತದಾರರ ಪ್ರಮಾಣ 21.1 ಪ್ರತಿಶತ ಕಡಿಮೆ ಆಗಿದೆ. ಅಂತಿಮ ಮತದಾರರ ಪಟ್ಟಿ ನವೆಂಬರ್ 16ರಂದು ಪ್ರಕಟವಾಗಬೇಕಿದೆ.
ಅನರ್ಹ ಮತದಾರರನ್ನು ತೆಗೆದುಹಾಕುವ ಉದ್ದೇಶದ ಎಸ್‌ಐಆರ್ ಪ್ರಕ್ರಿಯೆ ಕಳೆದ ವರ್ಷ ಜೂನ್‌ನಲ್ಲಿ ಆರಂಭವಾಗಿದ್ದು, ಇದುವರೆಗೆ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಗಳಿಂದ 13 ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದೆ.
ಚುನಾವಣಾ ಆಯೋಗ ಏನು ನಿರ್ಧರಿಸಿತು?
ಸೆಪ್ಟೆಂಬರ್ 26ರಂದು ನಡೆದ ಪೂರ್ಣ ಚುನಾವಣಾ ಆಯೋಗದ ಸಭೆಯ ಬಳಿಕ, ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ಕಳವಳಗಳನ್ನು ಪರಿಹರಿಸುವ ನಿರ್ಧಾರಗಳನ್ನು ಆಯೋಗ ಪ್ರಕಟಿಸಿತು.
ತಾರ್ಕಿಕ ವ್ಯತ್ಯಾಸಗಳೆಂದು ಗುರುತಿಸಲಾದ ಪ್ರಕರಣಗಳಲ್ಲಿ ಮತದಾರರು ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಬೇಕಾಗಿಲ್ಲ ಎಂದು ಆಯೋಗ ತಿಳಿಸಿತು. ಬದಲಾಗಿ BLOಗಳು ಮತದಾರರ ಮನೆಗಳಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಿ ECINetನಲ್ಲಿ ಅಪ್‌ಲೋಡ್ ಮಾಡಬಹುದು ಎಂದು ಹೇಳಿತು.
ಹಿರಿಯ ಉಪ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ECINet ವ್ಯವಸ್ಥೆಯನ್ನು ಪರಿಶೀಲಿಸಲಾಗುವುದು ಎಂದು ಚುನಾವಣಾ ಆಯೋಗ ನಿರ್ಧರಿಸಿದ್ದು, ಈ ಸಮಿತಿಯಲ್ಲಿ IIT ಅಥವಾ IIITಯ ಸ್ವತಂತ್ರ ತಜ್ಞರೊಬ್ಬರೂ ಇರಲಿದ್ದಾರೆ ಎಂದು ವರದಿ ತಿಳಿಸಿದೆ.
ಚುನಾವಣಾ ವ್ಯವಸ್ಥೆಯ ತಾಂತ್ರಿಕ ಬೆನ್ನೆಲುಬಾಗಿ ECINet ಅನ್ನು ಜನವರಿ 22ರಂದು ಆರಂಭಿಸಲಾಗಿತ್ತು. ಇದರಡಿಯಲ್ಲಿ 40ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಪೋರ್ಟಲ್‌ಗಳನ್ನು ಒಂದೇ ವೇದಿಕೆಯಡಿ ತರಲಾಗಿದೆ. ಮತದಾರರ ಪಟ್ಟಿಯ ನಿರ್ವಹಣೆ ಮತ್ತು ನವೀಕರಣ ಸೇರಿದಂತೆ ವಿವಿಧ ಕಾರ್ಯಗಳಿಗೆ ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ.
ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ತನಿಖೆಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖಬೀರ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿಯ ದತ್ತಾಂಶವನ್ನು ಕೇಂದ್ರೀಕರಿಸುವುದು ಮತ್ತು ರಾಜ್ಯ ಮಟ್ಟದ ಅಧಿಕಾರಿಗಳ ಪ್ರವೇಶವನ್ನು ನಿರ್ಬಂಧಿಸುವುದರ ಕುರಿತು ಕಳವಳ ವ್ಯಕ್ತಪಡಿಸಿದ್ದರು.
ಎಸ್‌ಐಆರ್‌ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯದ ಕುರಿತು ದಿ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ತನಿಖೆ ಪ್ರಕಟವಾದ ಕೆಲವೇ ದಿನಗಳ ಬಳಿಕ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಯ ಈ ಬೇಡಿಕೆಗಳು ಬಂದಿವೆ.
ಚುನಾವಣಾ ಆಯುಕ್ತರಾದ ಸುಖಬೀರ್ ಸಂಧು ಮತ್ತು ವಿವೇಕ್ ಜೋಶಿ ಅವರು ಎಸ್‌ಐಆರ್ ಮತ್ತು ಮತದಾರರ ಪಟ್ಟಿಗಳಿಗೆ ಸಂಬಂಧಿಸಿದ ನಿರ್ಧಾರಗಳು ಹಾಗೂ ಪ್ರಕ್ರಿಯೆಗಳ ಕುರಿತು 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ಔಪಚಾರಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಆ ತನಿಖೆ ತಿಳಿಸಿತ್ತು.