×
Ad

SIR ಪರಿಷ್ಕರಣೆ | ನಾಲ್ಕು ರಾಜ್ಯಗಳಲ್ಲಿ ಅಳಿಸಿದ್ದು 22.55 ಲಕ್ಷ ಮತದಾರರ ಹೆಸರು!

Update: 2026-07-05 19:28 IST

ಸಾಂದರ್ಭಿಕ ಚಿತ್ರ (PTI)

ಒಡಿಶಾ, ಮಣಿಪುರ, ಮಿಝೋರಾಂ, ಸಿಕ್ಕಿಂ ಕರಡು ಪಟ್ಟಿಗಳಲ್ಲಿ ಶೇ.6.12ರಷ್ಟು ಕಡಿತ; ಮಿಝೋರಾಂನಲ್ಲಿ ಕನಿಷ್ಠ, ಸಿಕ್ಕಿಂನಲ್ಲಿ ಗರಿಷ್ಠ ಅಳಿಸುವಿಕೆ

ಹೊಸದಿಲ್ಲಿ: ವಿಶೇಷ ತೀವ್ರ ಪರಿಷ್ಕರಣೆ (S I R) ಪ್ರಕ್ರಿಯೆಯ ಮೂರನೇ ಹಂತದ ಎಣಿಕೆ ಪೂರ್ಣಗೊಂಡಿರುವ ಒಡಿಶಾ, ಮಣಿಪುರ, ಮಿಝೋರಾಂ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಒಟ್ಟು 22.55 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ನಾಲ್ಕು ರಾಜ್ಯಗಳ ಒಟ್ಟು 3.68 ಕೋಟಿ ಮತದಾರರಲ್ಲಿ ಶೇ.6.12ರಷ್ಟು ಅಳಿಸುವಿಕೆ ದಾಖಲಾಗಿದೆ.

ಚುನಾವಣಾ ಆಯೋಗವು ರವಿವಾರ ಈ ನಾಲ್ಕು ರಾಜ್ಯಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಮೃತಪಟ್ಟವರು, ಶಾಶ್ವತ ಸ್ಥಳಾಂತರ ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ನೋಂದಣಿ ಹೊಂದಿರುವುದರಿಂದ 22,55,120 ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಕರಡು ಪಟ್ಟಿಯಲ್ಲಿ ಒಟ್ಟು 3,45,83,633 ಮತದಾರರ ಹೆಸರುಗಳು ಉಳಿದಿವೆ.

ನಾಲ್ಕು ರಾಜ್ಯಗಳ ಪೈಕಿ ಮಿಝೋರಾಂನಲ್ಲಿ ಅತಿ ಕಡಿಮೆ, ಶೇ.5.2ರಷ್ಟು ಅಳಿಸುವಿಕೆ ದಾಖಲಾಗಿದ್ದರೆ, ಸಿಕ್ಕಿಂನಲ್ಲಿ ಅತಿ ಹೆಚ್ಚು ಶೇ.8ರಷ್ಟು ಅಳಿಸುವಿಕೆ ದಾಖಲಾಗಿದೆ.

ಪ್ರಸ್ತುತ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ನ ಪ್ರಕ್ರಿಯೆ ನಡೆಯುತ್ತಿದೆ. ನಾಗಾಲ್ಯಾಂಡ್ ಮತ್ತು ತ್ರಿಪುರದಲ್ಲಿ ಕ್ರಮವಾಗಿ ಆಗಸ್ಟ್ 16 ಮತ್ತು ಸೆಪ್ಟೆಂಬರ್ 15ರಂದು ಈ ಪ್ರಕ್ರಿಯೆ ಆರಂಭವಾಗಲಿದೆ. ಜುಲೈ 3ರಂದು ಎಣಿಕೆ ಪೂರ್ಣಗೊಂಡಿರುವ ದಾದ್ರಾ ಮತ್ತು ನಗರ ಹವೇಲಿ ಹಾಗೂ ದಾಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಜುಲೈ 10ರಂದು ಪ್ರಕಟಿಸಲಾಗುವುದು.

ಕಳೆದ ವರ್ಷ ಜೂನ್‌ ನಲ್ಲಿ ಬಿಹಾರದಿಂದ ಆರಂಭವಾದ ಎಸ್‌ಐಆರ್ ಪ್ರಕ್ರಿಯೆ ಇದುವರೆಗೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ಣಗೊಂಡಿದೆ. ಈ ಪ್ರಕ್ರಿಯೆಯ ಬಳಿಕ ಮತದಾರರ ಪಟ್ಟಿಯಲ್ಲಿ ಒಟ್ಟಾರೆ ಸುಮಾರು ಶೇ.10.5ರಷ್ಟು ಅಥವಾ 5.83 ಕೋಟಿ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ.

ಒಡಿಶಾದಲ್ಲಿ ಶೇ.6.02ರಷ್ಟು ಅಳಿಸುವಿಕೆ ದಾಖಲಾಗಿದೆ. ರಾಜ್ಯದ ಒಟ್ಟು 3,33,99,591 ಮತದಾರರಲ್ಲಿ 3,13,87,034 ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಉಳಿದಿದ್ದು, 20,12,557 ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಳಿಸಲಾದ ಹೆಸರುಗಳಲ್ಲಿ 10.07 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 8.32 ಲಕ್ಷ ಮಂದಿ ಮೃತಪಟ್ಟವರು ಹಾಗೂ ಸುಮಾರು 1.58 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ ಹೊಂದಿರುವವರು ಸೇರಿದ್ದಾರೆ.

ಮಣಿಪುರದಲ್ಲಿ ಶೇ.7.5ರಷ್ಟು ಅಳಿಸುವಿಕೆ ದಾಖಲಾಗಿದೆ. ಒಟ್ಟು 20,93,076 ಮತದಾರರಲ್ಲಿ 19,34,399 ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಉಳಿದಿದ್ದು, 1,58,677 ಹೆಸರುಗಳನ್ನು ತೆಗೆದುಹಾಕಲಾಗಿದೆ. ರಾಜ್ಯದಲ್ಲಿ ಸುಮಾರು 43 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದ್ದು, 1.08 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ಹೆಚ್ಚುವರಿಯಾಗಿ, 7,394 ಮಂದಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ ಹೊಂದಿರುವುದು ಪತ್ತೆಯಾಗಿದೆ.

ಮಿಝೋರಾಂನಲ್ಲಿ ಒಟ್ಟು 8,75,068 ಮತದಾರರಲ್ಲಿ 8,28,906 ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಉಳಿದಿದ್ದು, 46,162 ಹೆಸರುಗಳನ್ನು ತೆಗೆದುಹಾಕಲಾಗಿದೆ. ಮೃತಪಟ್ಟವರ ಸಂಖ್ಯೆ 21,295 ಆಗಿದ್ದರೆ, 22,311 ಮಂದಿ ಶಾಶ್ವತ ಸ್ಥಳಾಂತರಗೊಂಡಿದ್ದಾರೆ. ಬಹು ಸ್ಥಳಗಳಲ್ಲಿ ನೋಂದಣಿ ಹೊಂದಿದ್ದ 2,248 ಮಂದಿಯ ಹೆಸರುಗಳನ್ನು ಸಹ ಅಳಿಸಲಾಗಿದೆ.

ಸಿಕ್ಕಿಂನಲ್ಲಿ ಶೇ.8ರಷ್ಟು ಅಳಿಸುವಿಕೆ ದಾಖಲಾಗಿದ್ದು, ಇದು ನಾಲ್ಕು ರಾಜ್ಯಗಳ ಪೈಕಿ ಅತಿ ಹೆಚ್ಚಿನ ಪ್ರಮಾಣವಾಗಿದೆ. ರಾಜ್ಯದ ಒಟ್ಟು 4,71,018 ಮತದಾರರಲ್ಲಿ 4,33,294 ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಉಳಿದಿದ್ದು, 37,724 ಹೆಸರುಗಳನ್ನು ತೆಗೆದುಹಾಕಲಾಗಿದೆ.

ಈ ನಾಲ್ಕು ರಾಜ್ಯಗಳ ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 6ರಂದು ಪ್ರಕಟಿಸಲಾಗುವುದು. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಮತದಾರರು ತಮ್ಮ ಹೆಸರುಗಳನ್ನು ಸೇರಿಸುವುದು ಅಥವಾ ತೆಗೆದುಹಾಕುವ ಸಂಬಂಧ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಹೊಸ ಮತದಾರರು ಸಹ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News