ಸಂಜಿತ್ ಬಂಕರ್ ರಾಯ್ | Photo Credit : X/@ShashiTharoor

ಜೈಪುರ: ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದ ಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ಬೇರ್‌ಫೂಟ್ ಕಾಲೇಜ್ ಸಂಸ್ಥಾಪಕ ಸಂಜಿತ್ ‘ಬಂಕರ್’ ರಾಯ್ (81) ಮಂಗಳವಾರ ಬೆಳಿಗ್ಗೆ ನಿಧನರಾದರು.

ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಟಿಲೋನಿಯಾದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಿಗ್ಗೆ 6.15ಕ್ಕೆ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

‘ಬಂಕರ್ ರಾಯ್ ಅವರ ಇಚ್ಛೆಯಂತೆ ಟಿಲೋನಿಯಾದ ತಮ್ಮ ಸ್ವಂತ ಮನೆಯಲ್ಲೇ ನಿಧನರಾದರು. ಅವರನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಅನೇಕ ಜನರು ಅವರ ಅಂತಿಮ ಕ್ಷಣಗಳಲ್ಲಿ ಜೊತೆಗಿದ್ದರು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಂಗಳವಾರ ಸಂಜೆ 4 ಗಂಟೆಗೆ ಟಿಲೋನಿಯಾದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ರಾಯ್ ಅವರು 1972ರಲ್ಲಿ ಟಿಲೋನಿಯಾದಲ್ಲಿ ‘ಸೋಷಿಯಲ್ ವರ್ಕ್ ಅಂಡ್ ರಿಸರ್ಚ್ ಸೆಂಟರ್’ (Social Work and Research Centre) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ ‘ಬೇರ್‌ಫೂಟ್ ಕಾಲೇಜ್’ ಎಂದೇ ಜನಪ್ರಿಯವಾಗಿದೆ. ರಾಜಸ್ಥಾನದ ಸಣ್ಣ ಹಳ್ಳಿಯೊಂದರಲ್ಲಿ ಆರಂಭವಾದ ಸಂಸ್ಥೆ, ನಂತರ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು.

ʼಬೇರ್‌ಫೂಟ್ ಕಾಲೇಜ್ʼ ಮೂಲಕ ಗ್ರಾಮೀಣ ಜನರಿಗೆ ಸೌರಶಕ್ತಿ, ಜಲ ಸಂರಕ್ಷಣೆ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಯಿತು. ಗ್ರಾಮಗಳ ಅಭಿವೃದ್ಧಿಯಲ್ಲಿ ಮಹಿಳೆಯರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಸಂಸ್ಥೆ ವಿಶೇಷ ಆದ್ಯತೆ ನೀಡಿತು.

ಶಾಲೆಗೆ ಹೋಗದ ಮಹಿಳೆಯರಿಗೆ ಸೌರಶಕ್ತಿ ತರಬೇತಿ

ಬೇರ್‌ಫೂಟ್ ಕಾಲೇಜಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು ಗ್ರಾಮೀಣ ಮಹಿಳೆಯರಿಗೆ ಸೌರಶಕ್ತಿಯ ಬಳಕೆಯ ತರಬೇತಿ ನೀಡಿದ್ದು. ಶಾಲೆಗೆ ಎಂದೂ ಹೋಗದ ಮಹಿಳೆಯರಿಗೂ ಸೌರ ದೀಪಗಳನ್ನು ಅಳವಡಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದನ್ನು ಕಲಿಸಲಾಯಿತು. ತರಬೇತಿ ಪಡೆದ ಮಹಿಳೆಯರು ತಮ್ಮ ಹಳ್ಳಿಗಳಿಗೆ ಮರಳಿ, ದೂರದ ಪ್ರದೇಶಗಳ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದರು. ಈ ಕಾರ್ಯಕ್ರಮ ಭಾರತಕ್ಕೆ ಮಾತ್ರ ಸೀಮಿತವಾಗದೆ ಇತರ ದೇಶಗಳಿಗೂ ವಿಸ್ತರಿಸಿತು. ವಿವಿಧ ದೇಶಗಳ ಮಹಿಳೆಯರು ಸೌರಶಕ್ತಿ ತಂತ್ರಜ್ಞಾನ ಕಲಿಯಲು ಟಿಲೋನಿಯಾಗೆ ಆಗಮಿಸಿದರು.

ಸಂಸ್ಥೆಯು ಮಳೆನೀರು ಕೊಯ್ಲು, ಗ್ರಾಮೀಣ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಾಂಪ್ರದಾಯಿಕ ಕರಕುಶಲ ಕಲೆಗಳ ಅಭಿವೃದ್ಧಿಯಲ್ಲಿಯೂ ಕೆಲಸ ಮಾಡಿದೆ.

ದುಡಿಯುವ ಮಕ್ಕಳಿಗಾಗಿ ರಾತ್ರಿ ಶಾಲೆ

ಹಗಲಿನಲ್ಲಿ ಕೆಲಸ ಮಾಡುವ ಅಥವಾ ಕುಟುಂಬದ ಕೆಲಸಗಳಲ್ಲಿ ನೆರವಾಗುವ ಕಾರಣಕ್ಕೆ ಸಾಮಾನ್ಯ ಶಾಲೆಗಳಿಗೆ ಹೋಗಲು ಸಾಧ್ಯವಾಗದ ಮಕ್ಕಳಿಗಾಗಿ ಬೇರ್‌ಫೂಟ್ ಕಾಲೇಜ್ ರಾತ್ರಿ ಶಾಲೆಗಳನ್ನು ನಡೆಸುತ್ತಿತ್ತು. ಈ ಮೂಲಕ ಅಂತಹ ಮಕ್ಕಳಿಗೂ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

ರಾಯ್ ಅವರ ಗ್ರಾಮೀಣ ಅಭಿವೃದ್ಧಿಯ ಕಲ್ಪನೆಗೆ ಮಹಾತ್ಮ ಗಾಂಧಿಯವರ ‘ಗ್ರಾಮ ಸ್ವಾವಲಂಬನೆ’ಯ ಪರಿಕಲ್ಪನೆ ಸ್ಫೂರ್ತಿಯಾಗಿತ್ತು. ಗ್ರಾಮೀಣ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಂಪೂರ್ಣವಾಗಿ ಹೊರಗಿನ ತಜ್ಞರನ್ನೇ ಅವಲಂಬಿಸಬಾರದು ಎಂಬುದು ಅವರ ನಂಬಿಕೆಯಾಗಿತ್ತು ಎಂದು ಅವರ ಆಪ್ತರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor