ಜಂತರ್ ಮಂತರ್ ಹಲ್ಲೆ ಪ್ರಕರಣ: ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ತಿಹಾರ್ ಜೈಲಿನಿಂದ ಬಿಡುಗಡೆ
ಸ್ವತಂತ್ರ ಭಾರದ್ವಾಜ್ | Photo Credit : PTI
ಹೊಸದಿಲ್ಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿನಿಯೋರ್ವಳ ತಂದೆಯ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಗೆ ಮಧ್ಯಂತರ ಜಾಮೀನು ಹಿನ್ನೆಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಕುರಿತ ವೈರಲ್ ವಿಡಿಯೋದಲ್ಲಿ, ಜೈಲಿನ ಹೊರಗೆ ಕಾಯುತ್ತಿದ್ದ ಕಾರಿನತ್ತ ಭಾರದ್ವಾಜ್ ವೇಗವಾಗಿ ಹೋಗಿ ಕಾರಿನಲ್ಲಿ ಸಹಚರರೊಂದಿಗೆ ತೆರಳುತ್ತಿರುವುದು ಕಂಡುಬಂದಿದೆ.
ಸೆಪ್ಟೆಂಬರ್ 15ರಂದು ದಿಲ್ಲಿ ನ್ಯಾಯಾಲಯ ಭಾರದ್ವಾಜ್‌ಗೆ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಅವಧಿಯಲ್ಲಿ ನಡವಳಿಕೆ ಆಧಾರದಲ್ಲಿ ಖಾಯಂ ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.
ಜಾಮೀನು ನೀಡುವ ಸಂದರ್ಭದಲ್ಲಿ ಸೆಷನ್ಸ್ ನ್ಯಾಯಾಲಯ ಸ್ವತಂತ್ರ ಭಾರದ್ವಾಜ್ ಗೆ ಹಲವು ಷರತ್ತುಗಳನ್ನು ವಿಧಿಸಿತ್ತು. ದೂರುದಾರರ ಕುಟುಂಬದ ಕುರಿತು ಸಾಮಾಜಿಕ ಜಾಲತಾಣ ಅಥವಾ ಯಾವುದೇ ಮಾಧ್ಯಮ ವೇದಿಕೆಗಳಲ್ಲಿ ಮಾತನಾಡುವುದು, ಪೋಸ್ಟ್ ಮಾಡುವುದು ಅಥವಾ ಚರ್ಚಿಸದಂತೆ ನಿರ್ಬಂಧಿಸಿತ್ತು.
ದೂರುದಾರರು, ಅವರ ಪುತ್ರಿ ಅಥವಾ ಯಾವುದೇ ಸಾಕ್ಷಿಯನ್ನು ಸಂಪರ್ಕಿಸದಂತೆ ಅಥವಾ ಸಾಕ್ಷ್ಯಗಳನ್ನು ತಿರುಚದಂತೆ ಸ್ವತಂತ್ರ ಭಾರದ್ವಾಜ್ ಗೆ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು.