CJP ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರಿಂದ ಅಶ್ರುವಾಯು ಪ್ರಯೋಗ

Update: 2026-07-20 14:21 IST

Photo Credit :  X/@_YogendraYadav

ಹೊಸದಿಲ್ಲಿ : ಸಂಸತ್ತಿನತ್ತ ಮೆರವಣಿಗೆ ಹೊರಟಿದ್ದ ಭಾರಿ ಸಂಖ್ಯೆಯ ಸಿಜೆಪಿ ನೇತೃತ್ವದ ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ಭೇದಿಸಿ ಮುನ್ನಡೆಯುವಲ್ಲಿ ಯಶಸ್ವಿಯಾಗಿದ್ದು, ಸಂಸತ್ ಭವನದ ಬಳಿ ಭದ್ರತಾ ಪಡೆಗಳು ಅಶ್ರುವಾಯು ಮತ್ತು ಲಾಠಿಚಾರ್ಜ್ ಪ್ರಯೋಗಿಸಿ ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನ ನಡೆಸಿದ್ದಾರೆ.

ಶಾಸ್ತ್ರಿ ಭವನ, ರೈಸಿನಾ ರಸ್ತೆ, ಜನಪಥ್ ಮತ್ತು ಅಶೋಕ ರಸ್ತೆಗಳಲ್ಲಿ ನೆರೆದಿದ್ದ ಜನಸಮೂಹವನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ಗಳನ್ನು ಪ್ರಯೋಗಿಸಿದವು.

ಭದ್ರತಾ ಮುಂಜಾಗ್ರತಾ ಕ್ರಮವಾಗಿ, ಸಂಸತ್ತಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಪ್ರತಿಭಟನಾಕಾರರು ಸಂಸತ್ ಭವನದ ಸಮೀಪದಲ್ಲೇ ಇರುವ ರೈಲ್ ಭವನ, ಶಾಸ್ತ್ರಿ ಭವನ ಮತ್ತು ಕೃಷಿ ಭವನಗಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷಿ ಭವನದ ಬಳಿ ಇರುವ ಬೋಟ್ ಕ್ಲಬ್ನಲ್ಲೂ ಸಹ ಭಾರಿ ಸಂಖ್ಯೆಯ ಪ್ರತಿಭಟನಾಕಾರರು ಕಂಡುಬಂದಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಪ್ರತಿಭಟನಾಕಾರರು ಸಂಸತ್ತಿನತ್ತ ಮುನ್ನಡೆಯದಂತೆ ತಡೆಯಲು ಇಡೀ ಪ್ರದೇಶದಾದ್ಯಂತ ಸಮವಸ್ತ್ರಧಾರಿ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಉಡುಪಿನಲ್ಲಿರುವ ಅಧಿಕಾರಿಗಳನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿತ್ತು.

ಅದಕ್ಕೂ ಮುನ್ನ, ಬೆಳಿಗ್ಗೆ ಸುಮಾರು 11:25 ರ ಹೊತ್ತಿಗೆ, ಪ್ರತಿಭಟನಾಕಾರರು ಕಟ್ಟುನಿಟ್ಟಿನ ಭದ್ರತಾ ವಲಯದಲ್ಲಿ ಅಳವಡಿಸಲಾಗಿದ್ದ ಹಲವು ಬ್ಯಾರಿಕೇಡ್ಗಳನ್ನು ನೂಕಿಕೊಂಡು ನುಗ್ಗಲು ಯತ್ನಿಸಿದರು.

ಈ ವೇಳೆ ನೂಕಾಟ-ತಳ್ಳಾಟದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವು ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪಿಟಿಐ ವರದಿ ತಿಳಿಸಿದೆ. ವರದಿಯ ಪ್ರಕಾರ, ಸುಮಾರು 10 ರಿಂದ 15 ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News