ಮುಂಬೈ, ಅ. 22: ‘ಲಾರೆನ್ಸ್ ಬಿಷ್ಣೋಯಿ ಎಂಬ ವ್ಯಕ್ತಿಯೇ ಇಲ್ಲ; ಅಮಿತ್ ಶಾ ಅವರೇ ಲಾರೆನ್ಸ್ ಬಿಷ್ಣೋಯಿ’ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡ ಬೆನ್ನಲ್ಲೇ ರಾವುತ್ ಈ ಆರೋಪ ಮಾಡಿದ್ದಾರೆ.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಶಿವಸೇನೆ (ಯುಬಿಟಿ)ಯ ವಾರ್ಷಿಕ ದಸರಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣದ ವಿರುದ್ಧವೂ ಹರಿಹಾಯ್ದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ ಅವರು, ಸುಪ್ರೀಂ ಕೋರ್ಟ್‌ ನಲ್ಲಿ ನಡೆಯುತ್ತಿರುವ ವಿಚಾರಣೆಗಳ ಬಗ್ಗೆಯೂ ಪ್ರಸ್ತಾಪಿಸಿದರು.

ಶಿವಸೇನೆಯ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಪುತ್ರ ಉದ್ಧವ್ ಠಾಕ್ರೆ ನೇತೃತ್ವದ ಬಣಕ್ಕೆ ಮುಂದಿನ ದಸರಾ ವೇಳೆಗೆ ಪಕ್ಷದ ಅಧಿಕೃತ ಚಿಹ್ನೆಯಾದ ‘ಬಿಲ್ಲು-ಬಾಣ’ ಮರಳಿ ಸಿಗಲಿದೆ ಎಂದು ರಾವುತ್ ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ನೇತೃತ್ವದ ಸರಕಾರ ಎಪ್ರಿಲ್‌ ನ ಕೊನೆಯ ವಾರದಲ್ಲಿ ಪತನಗೊಳ್ಳಲಿದೆ ಎಂದೂ ಅವರು ಭವಿಷ್ಯ ನುಡಿದರು. ಮೋದಿ-ಶಾ ಆಡಳಿತವನ್ನು ಅಧಿಕಾರದಿಂದ ಕೆಳಗಿಳಿಸುವುದರ ಜತೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನೂ ಹುದ್ದೆಯಿಂದ ತೆಗೆದುಹಾಕಲಾಗುವುದು ಎಂದು ಹೇಳಿದರು.

‘ನ್ಯಾಯಕ್ಕಾಗಿ ಹಾದಿಗಳೇ ಮುಚ್ಚಿವೆ’

ಇದೇ ವೇಳೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಆಡಳಿತಾರೂಢ ವ್ಯವಸ್ಥೆಯು ಎಲ್ಲ ಸರ್ಕಾರಿ ಯಂತ್ರಗಳ ಮೇಲೆ ನಿಯಂತ್ರಣ ಸಾಧಿಸಿದೆ. ಹೀಗಾಗಿ ಸಾಮಾನ್ಯ ನಾಗರಿಕರಿಗೆ ನ್ಯಾಯಕ್ಕಾಗಿ ಮೊರೆ ಹೋಗಲು ಯಾವುದೇ ದಾರಿ ಉಳಿದಿಲ್ಲ. ನ್ಯಾಯಾಲಯಗಳು, ಪೊಲೀಸ್ ಇಲಾಖೆ, ಅಧಿಕಾರಶಾಹಿ ಅಥವಾ ಮುಖ್ಯಮಂತ್ರಿಯವರ ಬಾಗಿಲು ತಟ್ಟಿದರೂ ನ್ಯಾಯ ಸಿಗುತ್ತಿಲ್ಲ. ನ್ಯಾಯ ಪಡೆಯುವ ಎಲ್ಲ ಮಾರ್ಗಗಳು ಮುಚ್ಚಲ್ಪಟ್ಟಾಗ, ಹತಾಶೆ ಮತ್ತು ಆಕ್ರೋಶಗೊಂಡ ನಾಗರಿಕರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದರೆ, ಈ ಸರಕಾರ ತಕ್ಷಣವೇ ಅವರನ್ನು ನಕ್ಸಲೈಟ್ ಅಥವಾ ಗುಂಡಾ ಎಂದು ಹಣೆಪಟ್ಟಿ ಕಟ್ಟುತ್ತದೆ’ ಎಂದು ಅವರು ಆರೋಪಿಸಿದರು.

ಟೈಗರ್ ಶ್ರಾಫ್ ಮೇಲಿನ ದಾಳಿಯನ್ನು ಉಲ್ಲೇಖಿಸಿ ಮಹಾರಾಷ್ಟ್ರ ಸರಕಾರದ ವಿರುದ್ಧವೂ ಠಾಕ್ರೆ ಕಿಡಿಕಾರಿದರು.

‘ಅದೃಷ್ಟವಶಾತ್ ಟೈಗರ್ ಶ್ರಾಫ್ ಬದುಕುಳಿದರು. ಆದರೆ, ಗುಂಡು ಉದ್ದೇಶಿತ ಜಾಗಕ್ಕೆ ಬಿದ್ದಿದ್ದರೆ ಏನಾಗುತ್ತಿತ್ತು? ಇದೇನು ಆಡಳಿತ? ಪೊಲೀಸ್ ಇಲಾಖೆ ಮತ್ತು ಇತರ ಸಂಸ್ಥೆಗಳು ಆಡಳಿತಾರೂಢ ವ್ಯವಸ್ಥೆಯ ಕೈಗೊಂಬೆಗಳಾಗಿ ಮಾರ್ಪಟ್ಟಿರುವುದು ಅತ್ಯಂತ ಆಕ್ರೋಶಕಾರಿ ಸಂಗತಿ. ನಿಮ್ಮ ಭದ್ರತಾ ತಪಾಸಣಾ ಕೇಂದ್ರಗಳಿದ್ದರೂ ಪ್ರಯೋಜನವೇನು?’ ಎಂದು ಪ್ರಶ್ನಿಸಿದರು.

‘ಶಸ್ತ್ರಾಸ್ತ್ರಗಳೊಂದಿಗೆ ಬಂದ ದಾಳಿಕೋರರನ್ನು ಗಮನಿಸಲು ಪೊಲೀಸರು ವಿಫಲರಾಗಿದ್ದಾರೆ. ಹಾಗಾದರೆ, ದಾಳಿಕೋರರು ಶಸ್ತ್ರಾಸ್ತ್ರಗಳನ್ನು ಒಳಗೆ ತರಲು ಹೇಗೆ ಸಾಧ್ಯವಾಯಿತು?’ ಎಂದೂ ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor