Adani ವಿರುದ್ಧದ ಆರೋಪಪಟ್ಟಿ ತಕ್ಷಣ ಕೈಬಿಡಲು ನಿರಾಕರಿಸಿದ ಅಮೆರಿಕದ ನ್ಯಾಯಾಲಯ
ಸಮರ್ಪಕ ಕಾರಣ ನೀಡದ ನ್ಯಾಯಾಂಗ ಇಲಾಖೆ; ಜುಲೈ 13ರೊಳಗೆ ವಿವರಣೆ ಸಲ್ಲಿಸಲು ಸೂಚನೆ
ಗೌತಮ್ ಅದಾನಿ | Photo Credit : PTI
ನ್ಯೂಯಾರ್ಕ್: ಸುಮಾರು 250 ಮಿಲಿಯನ್ ಡಾಲರ್ (ಸುಮಾರು 2,029 ಕೋಟಿ ರೂ.) ಲಂಚ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ಇತರರ ವಿರುದ್ಧ ದಾಖಲಿಸಲಾಗಿರುವ ಕ್ರಿಮಿನಲ್ ಆರೋಪಗಳನ್ನು ತಕ್ಷಣವೇ ಕೈಬಿಡುವಂತೆ ಅಮೆರಿಕದ ನ್ಯಾಯಾಂಗ ಇಲಾಖೆ (DoJ) ಸಲ್ಲಿಸಿದ್ದ ಮನವಿಯನ್ನು ಅಮೆರಿಕದ ಫೆಡರಲ್ ನ್ಯಾಯಾಲಯ ನಿರಾಕರಿಸಿದೆ. ಆರೋಪಪಟ್ಟಿ ವಜಾಗೊಳಿಸಲು ಸರಕಾರ ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
'ಯುನೈಟೆಡ್ ಸ್ಟೇಟ್ಸ್ Vs ಗೌತಮ್ ಎಸ್. ಅದಾನಿ ಮತ್ತು ಇತರರು' ಪ್ರಕರಣದ ವಿಚಾರಣೆ ನಡೆಸಿದ ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ಅಮೆರಿಕ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ನಿಕೋಲಸ್ ಜಿ. ಗರೌಫಿಸ್ ಅವರು, ಎಂಟು ಆರೋಪಿಗಳ ವಿರುದ್ಧದ ಆರೋಪಪಟ್ಟಿಯನ್ನು ವಜಾಗೊಳಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಇಲಾಖೆ ಹೆಚ್ಚಿನ ವಿವರಗಳನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದಾರೆ.
ಆರೋಪಪಟ್ಟಿಯನ್ನು ಪೂರ್ವಾಗ್ರಹದೊಂದಿಗೆ ವಜಾಗೊಳಿಸಲು ಸರಕಾರ ನೀಡಿರುವ ಪ್ರತಿಯೊಂದು ಕಾರಣಕ್ಕೂ ಸಮರ್ಪಕ ವಾಸ್ತವಿಕ ಆಧಾರ ಹಾಗೂ ಸ್ಪಷ್ಟ ವಿವರಣೆ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
"ಸರಕಾರ ಸಲ್ಲಿಸಿರುವ ಹೇಳಿಕೆಯು ಅತ್ಯಂತ ಸಂಕ್ಷಿಪ್ತವಾಗಿದ್ದು, ಆರೋಪಪಟ್ಟಿಯನ್ನು ವಜಾಗೊಳಿಸಲು ಸಮರ್ಪಕ ಕಾರಣಗಳನ್ನು ಒದಗಿಸುವುದಿಲ್ಲ. ಹಾಗೆಯೇ, ಸರ್ಕಾರದ ಮನವಿಯನ್ನು ಸಮಗ್ರವಾಗಿ ಪರಿಶೀಲಿಸಲು ನ್ಯಾಯಾಲಯಕ್ಕೆ ಅಗತ್ಯವಾದ ಮಾಹಿತಿಯನ್ನೂ ನೀಡಿಲ್ಲ" ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಫೆಡರಲ್ ಕ್ರಿಮಿನಲ್ ಪ್ರೊಸೀಜರ್ ನಿಯಮ 48(ಎ)ಯನ್ನು ಉಲ್ಲೇಖಿಸಿದ ನ್ಯಾಯಾಲಯವು, ಪ್ರಕರಣವನ್ನು ಕೈಬಿಡಲು ಸರಕಾರವು ಸ್ಪಷ್ಟ ಮತ್ತು ಸಮರ್ಪಕ ಕಾರಣಗಳನ್ನು ನೀಡಬೇಕು ಎಂದು ಹೇಳಿದೆ. ಪಾರದರ್ಶಕತೆ ಖಚಿತಪಡಿಸುವ ಉದ್ದೇಶದಿಂದ ರೂಪಿಸಲಾದ ಈ ನಿಯಮದ ಅಡಿಯಲ್ಲಿ, ಪ್ರಾಸಿಕ್ಯೂಷನ್ ತನ್ನ ನಿರ್ಧಾರಕ್ಕೆ ಸಮರ್ಥನೆ ನೀಡುವುದು ಕಡ್ಡಾಯವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
"ಸರಕಾರವು ಪ್ರಕರಣ ವಜಾಗೊಳಿಸಲು ಅಗತ್ಯವಾದ ತಾರ್ಕಿಕತೆ ಮತ್ತು ವಾಸ್ತವಾಂಶಗಳನ್ನು ಒದಗಿಸುವ ತನ್ನ ಜವಾಬ್ದಾರಿಯನ್ನು ಪೂರೈಸಲು ವಿಫಲವಾಗಿದೆ. ಹೆಚ್ಚುವರಿ ಮಾಹಿತಿಯಿಲ್ಲದೆ ನ್ಯಾಯಾಲಯವು ತನ್ನ ನ್ಯಾಯಾಂಗ ವಿವೇಚನೆಯನ್ನು ಸಮರ್ಪಕವಾಗಿ ಬಳಸಲು ಸಾಧ್ಯವಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಜುಲೈ 13, 2026ರೊಳಗೆ ವಿವರವಾದ ವಿವರಣೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ನ್ಯಾಯಾಂಗ ಇಲಾಖೆಗೆ ಸೂಚಿಸಿದೆ.
ಮೇ 18ರಂದು ನಿಯಮ 48(ಎ) ಅಡಿಯಲ್ಲಿ ಸಲ್ಲಿಸಿದ್ದ ಮನವಿಯಲ್ಲಿ, ಪ್ರಕರಣವನ್ನು ಮರುಪರಿಶೀಲಿಸಿದ ಬಳಿಕ ವೈಯಕ್ತಿಕ ಆರೋಪಿಗಳ ವಿರುದ್ಧದ ಕ್ರಿಮಿನಲ್ ಕ್ರಮವನ್ನು ಮುಂದುವರಿಸಲು ಹೆಚ್ಚಿನ ಸಂಪನ್ಮೂಲಗಳನ್ನು ವಿನಿಯೋಗಿಸದಿರಲು ನಿರ್ಧರಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿತ್ತು.
12 ಗಿಗಾವ್ಯಾಟ್ ಸೌರ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಗೌತಮ್ ಅದಾನಿ, ಸಾಗರ್ ಅದಾನಿ, ವ್ನೀತ್ ಜೈನ್, ರಂಜಿತ್ ಗುಪ್ತಾ ಹಾಗೂ ಇತರರು ಭಾರತೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳ ಅಧಿಕಾರಿಗಳಿಗೆ ಸುಮಾರು 2,029 ಕೋಟಿ ರೂ. (ಸುಮಾರು 265 ಮಿಲಿಯನ್ ಡಾಲರ್) ಲಂಚ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಸುಮಾರು 1,750 ಕೋಟಿ ರೂ. ಮೊತ್ತವನ್ನು ಆಂಧ್ರಪ್ರದೇಶದ ಅಧಿಕಾರಿಗಳಿಗೆ 7 ಗಿಗಾವ್ಯಾಟ್ ಸೌರಶಕ್ತಿ ಖರೀದಿ ಒಪ್ಪಂದ ಪಡೆಯಲು ಮೀಸಲಿಡಲಾಗಿತ್ತು ಎಂದು ಆರೋಪಿಸಲಾಗಿದೆ.
ಲಂಚದ ಯೋಜನೆಯನ್ನು ಮರೆಮಾಚುವ ಮೂಲಕ ಅದಾನಿ ಸಂಸ್ಥೆಗಳು ಅಮೆರಿಕದ ಹೂಡಿಕೆದಾರರಿಂದ 3 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೊತ್ತದ ಸಾಲ ಮತ್ತು ಭದ್ರತೆಗಳನ್ನು ಸಂಗ್ರಹಿಸಿವೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 2021ರಲ್ಲಿ ಅದಾನಿ ಸಂಸ್ಥೆಗಳು 750 ಮಿಲಿಯನ್ ಡಾಲರ್ ಮೌಲ್ಯದ ಹಿರಿಯ ಭದ್ರತಾ ನೋಟುಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಸುಮಾರು ಶೇ 25ರಷ್ಟು ಭಾಗವನ್ನು ಅಮೆರಿಕ ಮೂಲದ ಹೂಡಿಕೆದಾರರು ಖರೀದಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಪ್ರತಿವಾದಿಗಳ ವಿರುದ್ಧ ಸೆಕ್ಯುರಿಟೀಸ್ ವಂಚನೆ, ವೈರ್ ವಂಚನೆ, ವಿದೇಶಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದ ಪಿತೂರಿ ಹಾಗೂ ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ ಸಂಚು ಆರೋಪಗಳನ್ನು ಹೊರಿಸಲಾಗಿದೆ.
ಈ ಎಲ್ಲ ಆರೋಪಗಳನ್ನು ಅದಾನಿ ಸಮೂಹವು ಈ ಹಿಂದೆಯೇ ಆಧಾರರಹಿತ ಎಂದು ತಳ್ಳಿಹಾಕಿದೆ.
ನ್ಯಾಯಾಂಗ ಇಲಾಖೆಯ ಮನವಿಗೆ ಪ್ರಧಾನ ಸಹಾಯಕ ಉಪ ಅಟಾರ್ನಿ ಜನರಲ್ ಆರ್. ಟ್ರೆಂಟ್ ಮೆಕ್‌ಕೋಟರ್ ಹಾಗೂ ಅಮೆರಿಕದ ಅಟಾರ್ನಿ ಜೋಸೆಫ್ ನೊಸೆಲ್ಲಾ ಜೂನಿಯರ್ ಸಹಿ ಹಾಕಿದ್ದಾರೆ.
ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವ್ನೀತ್ ಜೈನ್ ಪರವಾಗಿ ಸುಲ್ಲಿವನ್ ಮತ್ತು ಕ್ರೋಮ್‌ವೆಲ್ ಎಲ್‌ಎಲ್‌ಪಿ ಸಂಸ್ಥೆಯ ಸಹಾಧ್ಯಕ್ಷ ರಾಬರ್ಟ್ ಜೆ.ಗಿಯುಫ್ರಾ ಜೂನಿಯರ್ ಹಾಗೂ ಪಾಲುದಾರ ಜೇಮ್ಸ್ ಮೆಕ್‌ಡೊನಾಲ್ಡ್ ವಾದ ಮಂಡಿಸುತ್ತಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ರಾಬರ್ಟ್ ಗಿಯುಫ್ರಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಯಕ್ತಿಕ ವಕೀಲರಾಗಿದ್ದಾರೆ.