×
Ad

ಕೆಲವು ದೇವಾಲಯಗಳಲ್ಲಿ ಅವಮಾನ ಅನುಭವಿಸಿದ್ದರಿಂದ ಇಸ್ಲಾಂ ಧರ್ಮ ಸ್ವೀಕರಿಸಿದೆ: ನಟ ಜೈ ಹೇಳಿಕೆ

Update: 2026-05-20 20:03 IST

ತಮಿಳು ನಟ ಜೈ | Photo Credit : X 

ಚೆನ್ನೈ, ಮೇ 20: ‘ಕೆಲವು ದೇವಾಲಯಗಳಲ್ಲಿ ನಾನು ಅವಮಾನ ಅನುಭವಿಸಿದ್ದರಿಂದ ಇಸ್ಲಾಂ ಧರ್ಮ ಸ್ವೀಕರಿಸಿದೆ’ ಎಂದು ತಮಿಳು ನಟ ಜೈ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ‘ಗಲಾಟಾ ಪ್ಲಸ್‌’ ಡಿಜಿಟಲ್‌ ವೇದಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಜೈ, ‘ನಾನು ಕೆಲವು ದೇವಾಲಯಗಳಲ್ಲಿ ಅವಮಾನಕಾರಿ ಅನುಭವಗಳನ್ನು ಎದುರಿಸಿದೆ. ಮಸೀದಿಗಳನ್ನು ಹೊರತುಪಡಿಸಿ ಬೇರೆ ಯಾವ ಸ್ಥಳದಲ್ಲಿಯೂ ವ್ಯಕ್ತಿಯಾಗಿ ಒಂದೇ ರೀತಿಯ ಗೌರವ ಸಿಕ್ಕ ಅನುಭವ ನನಗಿರಲಿಲ್ಲ. ಹೀಗಾಗಿ, 2011ರಿಂದ ಇಸ್ಲಾಂ ಧರ್ಮವನ್ನು ಅನುಸರಿಸಲು ಆರಂಭಿಸಿದೆ’ ಎಂದು ಹೇಳಿದ್ದಾರೆ.

‘ನನ್ನ ವೃತ್ತಿಜೀವನದ ಇಳಿಮುಖಕ್ಕೂ ಇಸ್ಲಾಂ ಧರ್ಮ ಸ್ವೀಕರಿಸಿದ್ದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

‘ನಾನು ಶಬರಿಮಲೆಗೆ ಮಾಲೆ ಧರಿಸುತ್ತಿದ್ದೆ. ಒಂದು ವರ್ಷ ಜೀಸಸ್‌ ರೋಸರಿ ಸರ ಧರಿಸಿ ಉಪವಾಸ ಆಚರಿಸಿದ್ದೆ. ಎಲ್ಲ ದೇವರೂ ಒಂದೇ ಎಂಬ ಭಾವನೆಯಲ್ಲಿ ವಿವಿಧ ಧರ್ಮಗಳ ಆಚರಣೆಗಳನ್ನು ಅನುಸರಿಸಿದ್ದೆ. ಆದರೆ, ಒಂದು ಹಂತದಲ್ಲಿ ಕೆಲವು ದೇವಾಲಯಗಳಲ್ಲಿ ಅನಿರೀಕ್ಷಿತ ಹಾಗೂ ಅವಮಾನಕಾರಿ ಘಟನೆಗಳನ್ನು ಎದುರಿಸಬೇಕಾಯಿತು. ಇಂತಹ ಅನುಭವಗಳು ಪುನರಾವರ್ತನೆಯಾಗುತ್ತಿದ್ದವು’ ಎಂದು ಜೈ ಹೇಳಿದ್ದಾರೆ.

ಈ ಹಿಂದೆ 2019ರಲ್ಲಿ ‘ವಿಕಟನ್‌’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿಯೂ ಜೈ ಇಸ್ಲಾಂ ಧರ್ಮ ಸ್ವೀಕರಿಸಿದ ಕುರಿತು ಮಾತನಾಡಿದ್ದರು. ‘ಕಳೆದ ಏಳು ವರ್ಷಗಳಿಂದ ನಾನು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದೇನೆ. ಇಸ್ಲಾಂ ಕುರಿತು ನನಗೆ ವಿವರಿಸಲಾಗದ ನಂಬಿಕೆ ಬೆಳೆದಿದೆ. ನಮ್ಮ ಮನೆಯಲ್ಲಿ ಈಗ ಸಂತೋಷವಿದೆ. ಯಾವುದೇ ದೇವರನ್ನು ಪೂಜಿಸದಿದ್ದ ಮಕ್ಕಳು ಈಗ ಕನಿಷ್ಠ ಯಾವುದಾದರೂ ದೇವರನ್ನು ಪ್ರಾರ್ಥಿಸುತ್ತಿದ್ದಾರೆ’ ಎಂದು ಹೇಳಿದ್ದರು.

‘ನಾನು ಮತಾಂತರಗೊಂಡಿದ್ದರೂ ಹೆಸರನ್ನು ಬದಲಿಸಿಲ್ಲ. ಮುಂದೆ “ಅಝೀಝ್‌ ಜೈ” ಎಂದು ಹೆಸರು ಬದಲಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದೂ ಅವರು ತಿಳಿಸಿದ್ದರು.

2002ರಲ್ಲಿ ನಿರ್ದೇಶಕ ಎ. ವೆಂಕಟೇಶ್‌ ನಿರ್ದೇಶಿಸಿದ್ದ ‘ಭಗವತಿ’ ಚಿತ್ರದ ಮೂಲಕ ಜೈ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಆ ಚಿತ್ರದಲ್ಲಿ ಅವರು ಹಾಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ‘ಚೆನ್ನೈ 600028’, ‘ಸುಬ್ರಮಣಿಯಪುರಂ’, ‘ವಾಮನನ್‌’, ‘ಗೋವಾ’, ‘ಎಂಗೇಯುಮ್‌ ಎಪ್ಪೊತುಮ್‌’ ಹಾಗೂ ‘ರಾಜ ರಾಣಿ’ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.

ಆರಂಭಿಕ ಹಂತದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದ ಜೈ, ನಂತರ ನಿರಂತರ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರೂ, ತಮಿಳು ಚಿತ್ರರಂಗದಲ್ಲಿ ಅವರ ಹೆಸರು ವಿರಳವಾಗಿ ಕೇಳಿಬರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News